ಅದಾನಿ ವಿರುದ್ಧ ಎಫ್‌ಐಆರ್ ದಾಖಲಿಸಿದ ಸಿಬಿಐ

Update: 2020-01-17 03:58 GMT

ಹೊಸದಿಲ್ಲಿ: ಆಂಧ್ರಪ್ರದೇಶದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲು ಪೂರೈಸುವ ಕಂಪನಿಗಳನ್ನು ಆಯ್ಕೆ ಮಾಡುವಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ನ್ಯಾಷನಲ್ ಕೋ ಅಪರೇಟಿವ್ ಕನ್‌ಸ್ಯೂಮರ್ ಫೆಡರೇಷನ್ (ಎನ್‌ಸಿಸಿಎಫ್) ಮಾಜಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಅದಾನಿ ಎಂಟರ್‌ಪ್ರೈಸಸ್, ಎನ್‌ಸಿಸಿಎಫ್ ಮಾಜಿ ಅಧ್ಯಕ್ಷ ವೀರೇಂದ್ರ ಸಿಂಗ್, ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಿ.ಪಿ.ಗುಪ್ತಾ, ಹಿರಿಯ ಸಲಹೆಗಾರ ಎಸ್.ಸಿ.ಸಿಂಘಾಲ್ ಅವರ ಹೆಸರು ಎಫ್‌ಐಆರ್‌ನಲ್ಲಿ ಸೇರಿದೆ. ಅಪರಾಧ ಪಿತೂರಿ, ವಂಚನೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಇವರ ವಿರುದ್ಧ ಆರೋಪ ದಾಖಲಿಸಲಾಗಿದೆ.

"ಬಿಡ್ಡರ್‌ಗಳ ಆಯ್ಕೆಯ ವಿಧಾನದಲ್ಲಿ ಮಾರ್ಪಾಡುಗಳನ್ನು ಮಾಡುವ ಮೂಲಕ ಆರೋಪಿಗಳು ಅವ್ಯವಹಾರ ಎಸಗಿದ್ದಾರೆ. ಈ ಮೂಲಕ ಅದಾನಿ ಎಂಟರ್‌ಪ್ರೈಸಸ್‌ಗೆ ಅನಗತ್ಯ ಅನುಕೂಲ ಮಾಡಿಕೊಡಲಾಗಿದ್ದು, ಅನರ್ಹತೆ ಹೊರತಾಗಿಯೂ ಆಮದು ಕಲ್ಲಿದ್ದಲನ್ನು ಎಪಿಜಿಇಎನ್‌ಸಿಓ ಕಂಪನಿಗೆ ಪೂರೈಸಲು ಅದಾನಿ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ ನೀಡಲಾಗಿದೆ" ಎಂದು ವಿವರಿಸಲಾಗಿದೆ. ಎನ್‌ಸಿಸಿಎಫ್ ಅಧಿಕಾರಿಗಳ ಪ್ರಮಾದವು ಅವರನ್ನು ಸಾರ್ವಜನಿಕ ಸೇವಕರಾಗಲು ಅನರ್ಹರನ್ನಾಗಿಸಿದ್ದು, ಕಂಪನಿ ಜತೆ ಸೇರಿ ಸಂಚು ರೂಪಿಸಿದ್ದಾರೆ ಎಂದು ಹೇಳಲಾಗಿದೆ.

"ಆಮದು ಕಲ್ಲಿದ್ದಲು ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಸಿಎಫ್ ಹಾಗೂ ಅದಾನಿ ಎಂಟರ್‌ಪ್ರೈಸಸ್ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಮಾಹಿತಿ ಇದೆ. ಇದು ಹಳೆಯ ಪ್ರಕರಣ. ಎಲ್ಲ ಪ್ರಕ್ರಿಯೆಗಳಿಗೆ ಸಂಸ್ಥೆ ಬದ್ಧವಾಗಿದ್ದು, ಕಲ್ಲಿದ್ದಲು ಪೂರೈಕೆಗೆ ಸಂಬಂಧಿಸಿದಂತೆ ಎಲ್ಲ ವಿಧಿವಿಧಾನ ಹಾಗೂ ಕಾನೂನುಗಳನ್ನು ಪಾಲಿಸಲಾಗಿದೆ" ಎಂದು ಅದಾನಿ ವಕ್ತಾರ ಹೇಳಿಕೊಂಡಿದ್ದಾರೆ.

ವಿಜಯವಾಡದ ನಾರ್ಲಾ ತಾತ ರಾವ್ ಥರ್ಮಲ್ ಪವರ್ ಪ್ಲಾಂಟ್ ಮತ್ತು ಕಡಪದಲ್ಲಿರುವ ರಾಯಲಸೀಮಾ ಥರ್ಮಲ್ ಪವರ್ ಪ್ಲಾಂಟ್‌ಗೆ 6 ಲಕ್ಷ ಟನ್ ಆಮದು ಕಲ್ಲಿದ್ದಲನ್ನು ಬಂದರು ಮೂಲಕ ಪೂರೈಸುವ ಸಂಬಂಧ ಆಂಧ್ರಪ್ರದೇಶ ವಿದ್ಯುತ್ ಉತ್ಪಾದನಾ ನಿಗಮ ಕರೆದ ಟೆಂಡರ್‌ಗೆ ಸಂಬಂಧಿಸಿದ ವಿವಾದ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News