ಪೇಜಾವರ ಸ್ವಾಮೀಜಿಯ ಪಲ್ಲಕ್ಕಿಗೆ ಕಲಾತ್ಮಕತೆಯ ಸ್ಪರ್ಶ

Update: 2020-01-17 14:24 GMT

 ಉಡುಪಿ, ಜ.17: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದ ಮೆರವಣಿಗೆಯಲ್ಲಿ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಏರಿ ಬರುವ ಪಲ್ಲಕ್ಕಿಗೆ ಕಲಾತ್ಮಕತೆಯ ಸ್ಪರ್ಶವನ್ನು ನೀಡಲಾಗಿದೆ.

ಈ ಹಿಂದೆ ಪಲ್ಲಕಿಯನ್ನು ಜರಿ ಬಟ್ಟೆಯಿಂದ ಅಲಂಕೃತಗೊಳಿಸಿ ಅದರಲ್ಲಿ ಸ್ವಾಮೀಜಿ ಕುಳಿತು ಮೆರವಣಿಗೆಯಲ್ಲಿ ಸಾಗಿಬರುತ್ತಿದ್ದರು. ಆದರೆ ಈ ಬಾರಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಕೃತಿಯ ಮೇಲಿನ ತನ್ನ ಒಲವನ್ನು ಪಲ್ಲಕ್ಕಿಯನ್ನು ತೆಂಗಿನ ಸಿರಿಯಿಂದ ಅಲಂಕೃತಗೊಳಿಸುವ ಮೂಲಕ ವಿಶಿಷ್ಟತೆ ಮೆರೆದಿದ್ದಾರೆ.

ಕಳೆದ 50ವರ್ಷಗಳಿಂದ ದೈವ ನರ್ತನ ಹಾಗೂ ಸಿರಿ ಸಿಂಗಾರದ ಸೇವೆ ಸಲ್ಲಿಸುತ್ತಿರುವ ಅಲೆವೂರು ಮಂಚಿಕೇರಿಯ ಸಾಧು ಪಾಣರ(64) ನೇತೃತ್ವದಲ್ಲಿ ನಾರಾಯಣ ಪಾಣಾರ, ಗಿರೀಶ್ ಪಾಣಾರ, ಪ್ರಜ್ವಲ್ ಪಾಣಾರ, ದಿನೇಶ್ ಪಾಣಾರ ಪಲ್ಲಕ್ಕಿಯನ್ನು ಅಲಂಕಾರಗೊಳಿಸುವ ಕಾರ್ಯವನ್ನು ಮಾಡಿದ್ದಾರೆ.

ಪೇಜಾವರ ಸ್ವಾಮೀಜಿಯ ಮಾರ್ಗದರ್ಶನದಲ್ಲಿ ತೆಂಗಿನ ಸಿರಿ, ಬಾಳೆ ದಿಂಡು, ಬಿದಿರನ್ನು ಬಳಸಿ ಪಲ್ಲಕಿಯನ್ನು ಸಾಂಪ್ರದಾಯಿಕ ವಾಗಿ ಸಜ್ಜುಗೊಳಿಸ ಲಾಗಿದೆ. ಸಿರಿಯಿಂದ ತಯಾರಿಸಿದ ಗಿಳಿ, ನಕ್ಷತ್ರ ಹಾಗೂ ಕದಿರು ಮುಡಿ (ಕಿರೀಟ) ಪಲ್ಲಕ್ಕಿಯ ವೈಭವವನ್ನು ಇನ್ನಷ್ಟು ಹೆಚ್ಚಿಸಿದೆ.

‘ಸ್ವಾಮೀಜಿಯ ಇಚ್ಛೆಯಂತೆ ಜ.17ರಂದು ಬೆಳಗ್ಗೆ 11ಗಂಟೆಗೆ ಪಲ್ಲಕ್ಕಿಯನ್ನು ಅಲಂಕಾರಗೊಳಿಸುವ ಕಾರ್ಯವನ್ನು ಆರಂಭಿಸಿ, ಸಂಜೆ ವೇಳೆ ಪಲ್ಲಕಿಯನ್ನು ಸಜ್ಜುಗೊಳಿಸಲಾಗಿದೆ. ಸುಮಾರು ಐದು ತಾಸುಗಳಲ್ಲಿ ಪಲ್ಲಕ್ಕಿಯನ್ನು ಸಿದ್ಧ ಪಡಿಸ ಲಾಗಿದೆ. ಸಿರಿ ಸಿಂಗಾರ ಸೇವೆ ಮಾಡುತ್ತಿರುವ ನಾವು ಇದೇ ಮೊದಲ ಬಾರಿಗೆ ಪಲ್ಲಕಿಯನ್ನು ಅಲಂಕಾರಗೊಳಿಸುವ ಕಾರ್ಯ ಮಾಡಿದ್ದೇವೆ’ ಎಂದು ಸಾಧು ಪಾಣರ ತಿಳಿಸಿದರು.

‘ಪ್ರಕೃತಿಯ ಮೇಲಿನ ಒಲವಿನಿಂದ ಕಲಾವಿದರನ್ನು ಕರೆಸಿ ತೆಂಗಿನ ಸಿರಿಯಲ್ಲಿ ಪಲ್ಲಕ್ಕಿಯನ್ನು ಅಲಂಕಾರಗೊಳಿಸಲಾಗುತ್ತಿದೆ. ಅದನ್ನು ಟ್ಯಾಬ್ಲೋ ಮೇಲೆ ಇರಿಸಿ ಮೆರವಣಿಗೆಯಲ್ಲಿ ಸಾಗಿ ಬರಲಾಗುವುದು. ಈ ಮೂಲಕ ಕಲಾವಿದರಿಗೆ ಅವಕಾಶ ನೀಡುವು ದರೊಂದಿಗೆ ಕಲೆಯನ್ನು ಬೆಳೆಸಿದಂತೆ ಆಗುತ್ತದೆ ಮತ್ತು ಅವರ ಬದುಕಿಗೂ ದಾರಿ ಕಂಡುಕೊಂಡಂತಾಗುತ್ತದೆ. ಮುಂದೆ ಇವರ ಈ ರೀತಿಯ ಅಲಂಕಾರಕ್ಕೆ ಬೇಡಿಕೆ ಬರಬಹುದಾಗಿದೆ’

-ಶ್ರೀವಿಶ್ವಪ್ರಸನ್ನ ತೀರ್ ಸ್ವಾಮೀಜಿ, ಪೇಜಾವರ ಮಠಾಧೀಶ

ಜಾರ್ಖಂಡ್ ಯುವಕನ ಸಿರಿ ಟೋಪಿ!

ಪೇಜಾವರ ಸ್ವಾಮೀಜಿ ಜಾರ್ಖಂಡ್ ಯುವಕನ ತೆಂಗಿನ ಸಿರಿಯ ಟೋಪಿಗೆ ಫಿದಾ ಆಗಿದ್ದಾರೆ. ಇವರು ಬೆಂಗಳೂರಿನಲ್ಲಿದ್ದಾಗ ಈತ ತಯಾರಿಸಿದ ಸಿರಿ ಟೋಪಿಯನ್ನು ನೋಡಿದ್ದು, ಆತನಿಂದ ಈ ರೀತಿಯ 25 ಟೋಪಿಗಳನ್ನು ತಯಾರಿಸಿ ಉಡುಪಿಗೆ ತರಿಸಿಕೊಂಡಿದ್ದಾರೆ.

ವಿಶಿಷ್ಟ ರೀತಿಯ ಈ ಟೋಪಿಯನ್ನು ಭಾವಿ ಪರ್ಯಾಯ ಅದಮಾರು ಸ್ವಾಮೀಜಿ ಸೇರಿದಂತೆ ಎಲ್ಲ ಸ್ವಾಮೀಜಿಗಳಿಗೆ ಕೂಡ ತೊಡಿಸಿದ್ದಾರೆ. ಮುಂದೆ ಈ ಯುವಕನನ್ನು ಉಡುಪಿಗೆ ಕರೆಸಿ ಬೇರೆ ಬೇರೆ ಸಂಘಸಂಸ್ಥೆಗಳ ಮೂಲಕ ಸ್ಥಳೀಯರಿಗೆ ಈ ಟೋಪಿ ತಯಾರಿಸುವ ಕಾರ್ಯಾಗಾರವನ್ನು ನಡೆಸುವ ಇರಾದೆಯನ್ನು ಕೂಡ ಸ್ವಾಮೀಜಿ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News