ಬ್ರಿಟೀಷರನ್ನು ಓಡಿಸಿದಂತೆ ಆರೆಸ್ಸೆಸ್ಸಿಗರನ್ನು ಓಡಿಸಿದರೆ ಸಮಸ್ಯೆಗೆ ಪರಿಹಾರ: ಹರೀಶ್ ಬಾಬು ಮಲಪುರಂ

Update: 2020-01-18 12:18 GMT

ಮಂಜನಾಡಿ: ದೇಶದಿಂದ ಬ್ರಿಟೀಷರನ್ನು ಓಡಿಸಿಯಾಗಿದೆ. ಇನ್ನು ಆರೆಸ್ಸೆಸ್ಸಿಗರನ್ನು ಅವರನ್ನು ಓಡಿಸಿದರೆ ಸಮಸ್ಯೆ ಪರಿಹಾರ ಆಗುತ್ತದೆ. ದೇಶಕ್ಕಾಗಿ ಆರ್ ಎಸ್ ಎಸ್ ಕಾರ್ಯಕರ್ತರು ಬಲಿಯಾದ ಉದಾಹರಣೆ ಇಲ್ಲ. ಪಾಕ್ ಗೆ ಹೋಗಿ ಎಂದು ಭಾರತೀಯರಿಗೆ ಪಾಠ ಮಾಡುವ ಬದಲು ಅಮಿತ್ ಶಾ ಪಾಕಿಸ್ತಾನಕ್ಕೆ ಹೋಗಲಿ ಎಂದು ಹರೀಶ್ ಬಾಬು ಮಲಪುರಂ ಹೇಳಿದರು.

ಅವರು ಪೌರತ್ವ ಸಂರಕ್ಷಣಾ ಸಮಿತಿ ಮಂಜನಾಡಿ ಮತ್ತು ನರಿಂಗಾನ ಇದರ ಆಶ್ರಯದಲ್ಲಿ ಎನ್ ಆರ್ ಸಿ, ಸಿಎಎ ಮತ್ತು ಎನ್ ಪಿಆರ್ ವಿರೋಧಿಸಿ ನರಿಂಗಾನ ಗ್ರಾಮದ ಪೊಟ್ಟೊಳಿಕೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಮಾಜಿ ಸಚಿವ ಸಿಎಂ ಇಬ್ರಾಹಿಂ ಮಾತನಾಡುತ್ತಾ, ಎನ್ ಆರ್ ಸಿ ಗೆ, ಅಮಿತ್ ಶಾ ರಿಗೆ ಹೆದರಬೇಕಾಗಿಲ್ಲ. ಭಾರತೀಯ ಪ್ರಜೆ ಹೆದರಿದ್ದಾರೆ ಎಂಬ ಭಾವನೆ ಬೇಡ. ಹಿಂದೂ ಧರ್ಮ ಉದಾತ್ತವಾದ ಧರ್ಮ. ಬಿಜೆಪಿಗೆ ಧರ್ಮದ ಬಗ್ಗೆ ಗೊತ್ತಿಲ್ಲ. ಎನ್ ಆರ್ ಸಿ ಜಾರಿಯಾದರೆ ದೇಶದ 64 ಕೋಟಿ ಜನರಿಗೆ ತೊಂದರೆ ಆಗುತ್ತದೆ. ಇದರಲ್ಲಿ ಮುಸ್ಲಿಂ ಇರುವುದು ನಾಲ್ಕು ಕೋಟಿ ಮಾತ್ರ ಎಂದು ಹೇಳಿದರು.

ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಎನ್ ಆರ್ ಸಿ ವಿರುದ್ಧ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ. ದೇಶವನ್ನು ಹಾಳು ಮಾಡಿದ್ದು ಬಿಜೆಪಿ. ಭಾರತೀಯರು ದೇಶ ಪ್ರೇಮಿಗಳು. ಇದರಲ್ಲಿ ಸಂಶಯ ಇಲ್ಲ. ಆದರೆ ಆರ್ ಎಸ್ ಎಸ್ ದೇಶ ಪ್ರೇಮಿ ಎನ್ನುವುದರಲ್ಲಿ ಸಂಶಯ ಇದೆ. ದೇಶದ ಆರ್ಥಿಕ ಮಟ್ಟ ಕುಸಿದು ಗಂಡಾಂತರದ ಅಂಚಿನಲ್ಲಿದೆ. 13 ರಾಜ್ಯಗಳು ಎನ್ ಆರ್ ಸಿಯನ್ನು ವಿರೋಧಿಸಿವೆ. ದೇಶವನ್ನು ಉಳಿಸಲು ಇಡಿ ದೇಶದಲ್ಲಿ ಹೋರಾಟ ನಡೆಯುತ್ತಿದೆ. ಅಕ್ಷರ ಅಭ್ಯಾಸ ಇಲ್ಲದವರು ಎಂದು ತೇಜಸ್ವಿ ಸೂರ್ಯ ನಮ್ಮ ಮೇಲೆ ಆರೋಪ ಮಾಡಿದ್ದಾರೆ. ಈ ದೇಶವನ್ನು ದಶಕಗಳ ಹಿಂದೆ ಕಟ್ಟಿದ್ದು ಅಕ್ಷರ ಅಭ್ಯಾಸ ಇಲ್ಲದ ಕಾರ್ಮಿಕರು ಎಂದು ಅವರು ಅರ್ಥ ಮಾಡಿಕೊಳ್ಳಲಿ ಎಂದರು.

ಬೇಕಲ ಇಬ್ರಾಹಿಂ ಮುಸ್ಲಿಯಾರ್ ದುವಾ ನೆರವೇರಿಸಿದರು. ಎನ್. ಎಸ್. ಕರೀಂ ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದರು. ವೇದಿಕೆಯಲ್ಲಿ ಇಬ್ರಾಹಿಂ ಬಾತಿಷ ಕೂಡ್ಲಿಪೇಟೆ, ಸಿರಾಜುದ್ದೀನ್ ಸಖಾಫಿ, ಹನೀಫ್ ಖಾನ್ ಕೊಡಾಜೆ,  ಶಾಸಕ ಯು.ಟಿ.ಖಾದರ್ ಉಪಸ್ಥಿತರಿದ್ದರು. ಕೆಎಂಕೆ ಸ್ವಾಗತಿಸಿದರು. ಇಬ್ರಾಹಿಂ ಅಹ್ಸನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News