ಸಿಎಎಯಿಂದ ಬುಡಕಟ್ಟು ಸಮುದಾಯಗಳ ಹಕ್ಕುಗಳ ಮೇಲೆ ದಾಳಿ: ಸುಪ್ರೀಂ ಗೆ ಅರ್ಜಿ

Update: 2020-01-17 15:35 GMT

ಹೊಸದಿಲ್ಲಿ,ಜ.17: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ಪ್ರಶ್ನಿಸಿ ಮೇಘಾಲಯದ ಇಬ್ಬರು ಸಾಮಾಜಿಕ ಹೋರಾಟಗಾರರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಸಿಎಎ ಗಡಿಪ್ರದೇಶಗಳಲ್ಲಿ ವಾಸವಾಗಿರುವವರ ನಿಜಸ್ಥಿತಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಮತ್ತು ಬುಡಕಟ್ಟು ಸಮುದಾಯಗಳ ಮೂಲಭೂತ ಹಕ್ಕುಗಳ ಮೇಲೆ ದಾಳಿ ನಡೆಸಿದೆ ಎಂದು ಅವರು ವಾದಿಸಿದ್ದಾರೆ.

ಸಾಮಾಜಿಕ ಹೋರಾಟಗಾರರಾದ ಮಾಂತ್ರೆ ಪಸ್ಸಾ ಮತ್ತು ಕಿರ್ಸೊಯಿಬರ್ ಪೈರ್ತು ಅವರು ಜ.13ರಂದು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಕಾಯ್ದೆಯು ವಿವಿಧ ಬುಡಕಟ್ಟು ಸಮುದಾಯಗಳ ನಡುವೆ ಒಡಕನ್ನು ಮೂಡಿಸುವ ರಾಜಾರೋಷ ಕುತಂತ್ರವಾಗಿದೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ಕಾಯ್ದೆಯು ಆಡಳಿತ ಬಿಜೆಪಿಯ ಹಿಂದು ಬಹುಸಂಖ್ಯಾತವಾದ ಮತ್ತು ಶ್ರೇಷ್ಠತೆಯ ನಂಬಿಕೆಯನ್ನು ಆಧರಿಸಿರುವ ಧಾರ್ಮಿಕ ತಾರತಮ್ಯದಿಂದ ಪ್ರೇರಿತವಾಗಿದೆ ಎಂದು ಆರೋಪಿಸಿರುವ ಅವರು,ಕಾಯ್ದೆಯು ಸಾಂಪ್ರದಾಯಿಕ ಧರ್ಮಗಳನ್ನು ಅನುಸರಿಸುತ್ತಿರುವ ಮೂಲನಿವಾಸಿ ಬುಡಕಟ್ಟುಗಳಿಗೆ ಸೇರಿದ ನಿರಾಶ್ರಿತರ ಖಾಸಗಿತನದ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ಅವರ ಮೇಲೆ ಸಂವಿಧಾನಬಾಹಿರ ಷರತ್ತುಗಳನ್ನು ಹೇರುತ್ತದೆ ಎಂದು ಹೇಳಿದ್ದಾರೆ.

ತಮ್ಮ ಭಾಷೆ,ನೆಲ ಮತ್ತು ಸಂಸ್ಕೃತಿಯ ರಕ್ಷಣೆಯ ಮೂಲನಿವಾಸಿ ಪ್ರಜೆಗಳ ಶಾಸನಬದ್ಧ ಕಾಳಜಿಗಳನ್ನು ಸರಕಾರವು ಗೌರವಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News