ಕೇರಳದಲ್ಲಿ ಸಿಎಎ ಅನುಷ್ಠಾನಕ್ಕೆ ಪಿಣರಾಯಿ ವಿಜಯನ್ ಯತ್ನ: ಚೆನ್ನಿತ್ತಲ ಆರೋಪ

Update: 2020-01-17 15:43 GMT
ಫೈಲ್ ಚಿತ್ರ

ತಿರುವನಂತಪುರ,ಜ.17: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ರಾಜ್ಯದಲ್ಲಿ ರಹಸ್ಯವಾಗಿ ಅನುಷ್ಠಾನಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ರಮೇಶ ಚೆನ್ನಿತಲ ಅವರು ಶುಕ್ರವಾರ ಇಲ್ಲಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪಿಣರಾಯಿ ಬಹಿರಂಗವಾಗಿ ಸಿಎಎ ಅನ್ನು ವಿರೋಧಿಸುತ್ತಿದ್ದಾರಾದರೂ ಅವರು ಮತ್ತು ಅವರ ಸರಕಾರ ಕಾಯ್ದೆಯನ್ನು ಜಾರಿಗೊಳಿಸಲು ಕ್ರಮಗಳಿಗೆ ಮುಂದಾಗಿದ್ದಾರೆ. ಸಿಎಎ ಹೆಸರಿನಲ್ಲಿ ರಾಜಕೀಯ ಲಾಭ ಗಳಿಕೆಯ ಪ್ರಯತ್ನಗಳನ್ನು ಮುಖ್ಯಮಂತ್ರಿಗಳು ನಿಲ್ಲಿಸಬೇಕು. ಜನರನ್ನು ವಂಚಿಸುವ ಬದಲು ರಾಜ್ಯದಲ್ಲಿ ಸಿಎಎ ಅನ್ನು ಜಾರಿಗೊಳಿಸಲಾಗುವುದಿಲ್ಲ ಎನ್ನುವುದನ್ನು ಅವರು ಖಚಿತಪಡಿಸಬೇಕು ಎಂದರು.

ಎಲ್ಲ ಸಾರ್ವಜನಿಕ ಸಭೆಗಳಲ್ಲಿ ಆರೆಸ್ಸೆಸ್ ಮತ್ತು ಕೇಂದ್ರವನ್ನು ಕಟುವಾಗಿ ಟೀಕಿಸುವ ಪಿಣರಾಯಿ ಸಿಎಎದ ಮೊದಲ ಭಾಗವಾಗಿರುವ ಎನ್‌ಪಿಆರ್‌ಗೆ ಸಂಬಂಧಿಸಿದಂತೆ ವಿಧಿವಿಧಾನಗಳನ್ನು ನಿಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದ ಚೆನ್ನಿತಲ,ಯಾವುದೇ ಬೆಲೆಯನ್ನು ತೆತ್ತಾದರೂ ಸಿಎಎ ಅನ್ನು ಜಾರಿಗೊಳಿಸುವ ತನ್ನ ಯೋಜನೆಯನ್ನು ರಾಜ್ಯ ಸರಕಾರವು ಮುನ್ನಡೆಸುತ್ತಿದೆ. ಅದು ಸಾರ್ವಜನಿಕವಾಗಿ ಸಿಎಎ ಮತ್ತು ಎನ್‌ಪಿಆರ್ ಅನ್ನು ವಿರೋಧಿಸುತ್ತಿದೆಯಾದರೂ ರಾಜ್ಯದಲ್ಲಿ ಅನುಷ್ಠಾನಕ್ಕೆ ಅಧಿಕೃತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಬಹಿರಂಗವಾಗಿ ಸಿಎಎ ಅನ್ನು ವಿರೋಧಿಸುತ್ತಿರುವ ಮುಖ್ಯಮಂತ್ರಿಗಳು ಗುಟ್ಟಿನಲ್ಲಿ ಮೋದಿ ಮತ್ತು ಅಮಿತ್ ಶಾ ಅವರೆದುರು ಒಳ್ಳೆಯವನಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಚೆನ್ನಿತಲ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News