ನರೇಂದ್ರ ಮೋದಿಯ ಪೌರತ್ವ ದಾಖಲೆ ಕೋರಿ ಆರ್‌ಟಿಐ ಅರ್ಜಿ ಸಲ್ಲಿಕೆ

Update: 2020-01-17 15:52 GMT
Photo: PTI

ಕೊಚ್ಚಿ, ಜ. 17: ಪ್ರಧಾನಿ ನರೇಂದ್ರ ಮೋದಿ ಅವರ ಭಾರತೀಯ ಪೌರತ್ವದ ದಾಖಲೆ ಕೋರಿ ಕೇರಳ ಮಾಹಿತಿ ಇಲಾಖೆಯಲ್ಲಿ ಆರ್‌ಟಿಐ ಅರ್ಜಿ ಸಲ್ಲಿಸಲಾಗಿದೆ.

ನರೇಂದ್ರ ಮೋದಿ ಅವರ ಪೌರತ್ವದ ಪುರಾವೆ ಕೋರಿ ಕೇರಳದ ತ್ರಿಶೂರು ಜಿಲ್ಲೆಯ ಚಾಲಕ್ಕುಡಿಯ ಪೊಟ್ಟಾ ನಿವಾಸಿ ಜೋಷಿ ಕುಲವೀಟಿಲ್ ಚಾಲಕ್ಕುಡಿ ಪೌರಾಡಳಿತದ ಸಾರ್ವಜನಿಕ ಮಾಹಿತಿ ಅಧಿಕಾರಿ ಅವರಲ್ಲಿ ಡಿಸೆಂಬರ್ 13ರಂದು ಆರ್‌ಟಿಐ ಅರ್ಜಿ ಸಲ್ಲಿಸಿದ್ದಾರೆ.

ಆರ್‌ಟಿಐ ಅರ್ಜಿಯನ್ನು ಹೊಸದಿಲ್ಲಿಯಲ್ಲಿರುವ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ ಕೊಡಲಾಗಿದೆ ಎಂದು ಪೌರಾಡಳಿತದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾನು ಪ್ರಚಾರ ಪಡೆಯಲು ಈ ಆರ್‌ಟಿಐ ಅರ್ಜಿ ಸಲ್ಲಿಸಿಲ್ಲ ಎಂದು ಆಪ್‌ ಕಾರ್ಯಕರ್ತ ಜೋಷಿ ಹೇಳಿದ್ದಾರೆ.

‘‘ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಈ ಆರ್‌ಟಿಐ ಅರ್ಜಿ ಸಲ್ಲಿಸಿದ್ದೇನೆ. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಸಾವಿರಾರು ಜನರ ಕಳವಳದ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಿದ್ದೇನೆ. ಪಾಸ್‌ಪೋರ್ಟ್ ಅಥವಾ ಆಧಾರ್ ಕಾರ್ಡ್ ಪೌರತ್ವ ಸಾಬೀತು ಪಡಿಸಲು ದಾಖಲೆಗಳು ಎಂದು ಪರಿಗಣಿಸದ ಹಿನ್ನೆಲೆಯಲ್ಲಿ ಜನರು ಆತಂಕಗೊಂಡಿದ್ದಾರೆ. ಆದುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಪೌರತ್ವ ಸಾಬೀತುಪಡಿಸಲು ವಿಶಿಷ್ಟ ದಾಖಲೆಗಳನ್ನು ಹೊಂದಿದ್ದಾರೆಯೇ ಎಂಬುದನ್ನು ತಿಳಿಯಲು ಬಯಸುತ್ತೇನೆ’’ ಎಂದು ಅವರು ಹೇಳಿದರು.

ಆರಂಭದಲ್ಲಿ ಈ ಆರ್‌ಟಿಐ ಅರ್ಜಿ ಸ್ವೀಕರಿಸಲು ಅಧಿಕಾರಿಗಳಿಗೆ ಇಷ್ಟವಿರಲಿಲ್ಲ. ಅಲ್ಲದೆ, ಅವರು ಮೋದಿ ಈ ದೇಶದ ಪ್ರಧಾನಿ ಎಂದು ಯಾರಿಗೆ ಗೊತ್ತಿಲ್ಲ ಎಂದು ಹೇಳಿ ನನ್ನನ್ನು ಅಪಹಾಸ್ಯ ಮಾಡಿದರು ಎಂದು ಜೋಶಿ ತಿಳಿಸಿದರು.

ಈ ದೇಶದಲ್ಲಿ ಜನಿಸಿದ್ದರೂ ಪೌರತ್ವ ತಿದ್ದುಪಡಿ ಕಾಯ್ದೆಯ ಕಾರಣಕ್ಕಾಗಿ ಅಧಿಕಾರಿಗಳಿಂದ ಕಿರುಕುಳಕ್ಕೆ ಒಳಗಾಗಲಿದ್ದೇವೆ ಎಂದು ಜನರು ಆತಂಕಪಟ್ಟುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

 ‘‘ಪೌರತ್ವ ಸಾಬೀತುಪಡಿಸಲು ತಮ್ಮಲ್ಲಿ ಹಳೆಯ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಿದ್ದಾರೆ ಎಂದು ಜನರು ಆತಂಕಗೊಂಡಿದ್ದಾರೆ. ಪೌರತ್ವ ಸಾಬೀತುಪಡಿಸಲು ಜನನ ಪ್ರಮಾಣ ಪತ್ರ ಕಡ್ಡಾಯವಾದರೆ, 1970ಕ್ಕಿಂತ ಹಿಂದೆ ಜನಿಸಿದ ಬಹುಸಂಖ್ಯಾತ ಜನರು ಜನನ ಪ್ರಮಾಣ ಪತ್ರ ಹೊಂದಿರದೇ ಇರುವುದರಿಂದ ಸಮಸ್ಯೆ ಎದುರಿಸಲಿದ್ದಾರೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News