ಹಿಟ್ಲರ್, ಮುಸೋಲಿನಿ ಪ್ರಜಾಪ್ರಭುತ್ವದ ಉತ್ಪನ್ನಗಳೇ ಆಗಿದ್ದರು: ಬಿಜೆಪಿ ನಾಯಕ ರಾಮ್ ಮಾಧವ್

Update: 2020-01-17 15:56 GMT

ಹೊಸದಿಲ್ಲಿ,ಜ.17: ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಮತ್ತು ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸೋಲಿನಿ ಅವರು ಪ್ರಜಾಪ್ರಭುತ್ವದ ಉತ್ಪನ್ನಗಳೇ ಆಗಿದ್ದರು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ ಅವರು ಹೇಳಿದ್ದಾರೆ.

ಗುರುವಾರ ಇಲ್ಲಿ ‘ರೈಸಿನಾ ಡೈಲಾಗ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಸಿಎಎ ವಿರುದ್ಧದ ಪ್ರತಿಭಟನೆಗಳನ್ನು ಪ್ರಸ್ತಾಪಿಸಿ,ಪ್ರಜಾಸತ್ತಾತ್ಮಕ ಪ್ರಕ್ರಿಯೆ (ಚುನಾವಣೆ)ಗಳಲ್ಲಿ ಸೋತವರು ಬೀದಿಗಳನ್ನು ಪ್ರಜಾಪ್ರಭುತ್ವದ ವೇದಿಕೆಯನ್ನಾಗಿಸಿಕೊಂಡು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ಹೇಳಿದರು.

ಪ್ರತಿಭಟನೆಗಳ ಕುರಿತು ಸಭಿಕರ ಪ್ರಶ್ನೆಗೆ ಉತ್ತರಿಸಿದ ರಾಮ್ ಮಾಧವ್, ಭಾರತೀಯ ಪ್ರಜಾಪ್ರಭುತ್ವವು ವಿವಿಧ ಅವಧಿಗಳ ವಾಸ್ತವ್ಯದ ಬಳಿಕ ವಿದೇಶಿಯರು ಭಾರತದ ಪ್ರಜೆಗಳಾಗಲು ಅವಕಾಶ ನೀಡುತ್ತಿದೆ,ಹೀಗಾಗಿ ಅದು ತಾರತಮ್ಯರಹಿತವಾಗಿದೆ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅತ್ಯಂತ ಪ್ರಜಾಸತ್ತಾತ್ಮಕ ರೀತಿಯಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ ಮತ್ತು ಸಂಸತ್ತಿನಲ್ಲಿ ನಡೆದ ಚರ್ಚೆಗಳ ಸಂದರ್ಭ ಕಾಯ್ದೆಯ ಕುರಿತು ಟೀಕೆಗಳಿಗೆ ಸರಕಾರವು ಉತ್ತರಿಸಿದೆ. ಹಿಂಸಾರಹಿತ ಟೀಕೆಗಳಿಗೆ ಉತ್ತರಿಸಲು ಸರಕಾರವು ಬದ್ಧವಾಗಿದೆ ಎಂದ ಅವರು,ವಿಭಿನ್ನ ಅಭಿಪ್ರಾಯವನ್ನು ಹೊಂದಿರುವವರು ಅದನ್ನು ಸೂಕ್ತವಾದ ವೇದಿಕೆಯಲ್ಲಿ ಮತ್ತು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News