ಉಡುಪಿ: ಪರ್ಯಾಯ ಮಹೋತ್ಸವದಲ್ಲಿ ಬಿಜೆಪಿಯ ಸಿಎಎ ಪರ ಸಹಿ ಸಂಗ್ರಹ ಅಭಿಯಾನಕ್ಕೆ ವಿರೋಧ

Update: 2020-01-17 16:57 GMT

ಉಡುಪಿ, ಜ.17: ನಾಡಿನ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿರುವ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವದಲ್ಲಿ ಉಡುಪಿ ನಗರ ಬಿಜೆಪಿಯಿಂದ ನಾಗರಿಕ ಪೌರತ್ವ ಕಾಯ್ದೆ ಬೆಂಬಲಿಸಿ ಸಹಿ ಸಂಗ್ರಹ ಅಭಿಯಾನ ನಡೆಸಲು ಅವಕಾಶ ನೀಡಿರುವ ಜಿಲ್ಲಾಡಳಿತದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಜ.17ರಂದು ಸಂಜೆ ನಗರದ ಪ್ರಧಾನ ಅಂಚೆ ಕಚೇರಿ ಬಳಿ ಬಿಜೆಪಿ ನಗರ ವತಿಯಿಂದ ಸಹಿ ಸಂಗ್ರಹ ಮತ್ತು ಪ್ರಧಾನ ಮಂತ್ರಿಯವರಿಗೆ ಪೋಸ್ಟ್ ಕಾರ್ಡ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಸಂಸದೆ ಶೋಭಾ ಕರಂದ್ಲಾಜೆ, ನಗರ ನಿಯೋಜಿತ ಅಧ್ಯಕ್ಷ ಮಹೇಶ್ ಠಾಕೂರ್, ನಗರಾಧ್ಯಕ್ಷ ಪ್ರಭಾಕರ್ ಪೂಜಾರಿ, ಪ್ರಮುಖರಾದ ಯಶ್ಪಾಲ್ ಸುವರ್ಣ, ದಾವೂದ್ ಅಬೂಬಕ್ಕರ್, ಸಲೀಂ ಭಾಗವಹಿಸಿದ್ದರು.

ಈ ಕಾರ್ಯ ಕ್ರಮದ ಮೂಲಕ ಸುಮಾರು 25000 ಪೋಸ್ ಕಾರ್ಡ್‌ಗಳನ್ನು ಸಿಎಎ, ಎನ್‌ಆರ್‌ಸಿ ಬೆಂಬಲಿಸಿ ಪತ್ರ ಬರೆಯುವ ಉದ್ದೇಶವನ್ನು ಇದರಲ್ಲಿ ಇಟ್ಟು ಕೊಳ್ಳಲಾಗಿದೆ. ದೇಶಾದ್ಯಂತ ನಡೆಯುತ್ತಿರುವ ತೀವ್ರ ಪ್ರತಿಭಟನೆಯ ಮಧ್ಯೆ ಧಾರ್ಮಿಕ ಕಾರ್ಯಕ್ರಮವಾಗಿರುವ ಪರ್ಯಾಯ ಮಹೋತ್ಸವದಲ್ಲಿ ರಾಜಕೀಯ ಪಕ್ಷ ವೊಂದಕ್ಕೆ ಸಿಎಎ, ಎನ್‌ಆರ್‌ಸಿ ಬೆಂಬಲಿಸಿ ಅಭಿಯಾನ ನಡೆಸಲು ಅನುವು ಮಾಡಿಕೊಟ್ಟಿರುವುದಕ್ಕೆ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದ ತೀವ್ರ ವಾಗಿ ಖಂಡಿಸಿದೆ.

‘ಈ ಕಾಯ್ದೆ ವಿರುದ್ಧ ಇಡೀ ದೇಶದಲ್ಲಿ ತೀವ್ರ ಪ್ರತಿಭಟನೆ ಹಾಗೂ ವಿರೋಧಗಳು ವ್ಯಕ್ತವಾಗುತ್ತಿರುವಾಗ ಜಿಲ್ಲಾಡಳಿತ ಬಿಜೆಪಿಯವರಿಗೆ ಈ ಕಾರ್ಯಕ್ರಮ ನಡೆಸಲು ಅವಕಾಶ ನೀಡಿರುವುದು ಸರಿಯಲ್ಲ. ಇಂದು ದಸಂಸ ವತಿಯಿಂದ ನಗರದ ಹೊರಭಾಗದಲ್ಲಿರುವ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ರೋಹಿತ್ ವೆಮುಲಾ ಕುರಿತ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಪರ್ಯಾಯ ಮಹೋತ್ಸವ ನಡೆಯುತ್ತಿರುವುದು ಬಿಜೆಪಿಯವರ ಸಹಿ ಸಂಗ್ರಹಕ್ಕಾಗಿಯೋ ಅಥವಾ ಭಕ್ತರಿಗಾಗಿಯೋ ಎಂದು ದಸಂಸ ಮುಖಂಡ ಶ್ಯಾಮ್‌ರಾಜ್ ಬಿರ್ತಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News