ಎನ್‌ಪಿಆರ್ ನಡೆಯದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿಗಳಿಗೆ ಕೇರಳ ಸರಕಾರ ತಾಕೀತು

Update: 2020-01-17 16:28 GMT
ಫೈಲ್ ಚಿತ್ರ-

ತಿರುವನಂತಪುರ,ಜ.17: ರಾಜ್ಯದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಪ್ರಕ್ರಿಯೆ ನಡೆಯದಂತೆ ನೋಡಿಕೊಳ್ಳಬೇಕೆಂದು ಕೇರಳ ಸರಕಾರವು ತನ್ನ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಾಕೀತು ಮಾಡಿದೆ. ಒಂದು ವೇಳೆ ರಾಜ್ಯ ಸರಕಾರದ ಈ ನಿರ್ಧಾರವನ್ನು ಪಾಲಿಸದೆ ಇದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗು ವುದೆಂದು ಅವರಿಗೆ ಎಚ್ಚರಿಕೆ ನೀಡಿದೆ.

 ಎನ್‌ಪಿಆರ್ ಪ್ರಕ್ರಿಯೆ ನಡೆಯದಂತೆ ಖಾತರಿಪಡಿಸಿಕೊಳ್ಳುವಂತೆ ಸೂಚಿಸಿ, ಕೇರಳ ಸರಕಾರದ ಮುಖ್ಯ ಕಾರ್ಯದರ್ಶಿ ( ಸಾಮಾನ್ಯ ಆಡಳಿತ) ಕೆ.ಆರ್.ಜ್ಯೋತಿಲಾಲ್ ಅವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

 ‘‘ನಿಮಗೆ ತಿಳಿದಿರುವಂತೆ 2021ರಲ್ಲಿ ರಾಜ್ಯ ಸರಕಾರದ ಪ್ರಸ್ತಾವನೆಯಲ್ಲಿರುವ ಜನಗಣತಿ ಕಾರ್ಯದ ಮೊದಲ ಹಂತದ ಸಂದರ್ಭ ಎನ್‌ಪಿಆರ್‌ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ನಡೆಸುವುದನ್ನು ರಾಜ್ಯ ಸರಕಾರ ತಡೆಹಿಡಿದಿದೆ. ಇದೀಗ ಕೆಲವು ಜನಗಣತಿಯ ಕಾರ್ಯಪ್ರವರ್ತಕರು 2021ರ ಜನಗಣತಿಗೆ ಸಂಬಂಧಿಸಿದ ವಿಷಯಗಳನ್ನು ಇತರ ಜನಗಣತಿಯ ಕಾರ್ಯಪ್ರವರ್ತಕರಿಗೆ ಕಳುಹಿಸುವಾಗ ಎನ್‌ ಪಿಆರ್ ಬಗ್ಗೆ ಉಲ್ಲೇಖಿಸುತ್ತಿರುವುದು ಗಮನಕ್ಕೆ ಬಂದಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

   ಇಂತಹ ಚಟುವಟಿಕೆಗಳು ಮರುಕಳಿಸದಂತೆ ಖುದ್ದಾಗಿ ನೋಡಿಕೊಳ್ಳಬೇಕು. ತಪ್ಪಿದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗವುದು ಎಂದು ಎಲ್ಲಾ ಜ್ಯೋತಿ ಲಾಲ್ ಅವರು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News