ದೇಶದ ಪ್ರಗತಿ ದರ ಹೆಚ್ಚಲು ಉದ್ಯಮಗಳಲ್ಲಿಯ ಬಾಧಕಗಳು ತೊಲಗಬೇಕು: ಟಾಟಾ ಸನ್ಸ್ ಅಧ್ಯಕ್ಷ

Update: 2020-01-17 16:34 GMT

ಮುಂಬೈ,ಜ.17: ದೇಶದ ಅಭಿವೃದ್ಧಿ ಪಥವನ್ನು ಉತ್ತಮಗೊಳಿಸಲು ಉದ್ಯಮಗಳನ್ನು ಕಾಡುತ್ತಿರುವ ಅಡೆತಡೆಗಳು ನಿವಾರಣೆಯಾಗಬೇಕು ಎಂದು ಟಾಟಾ ಸನ್ಸ್‌ನ ಅಧ್ಯಕ್ಷ ಎನ್.ಚಂದ್ರಶೇಖರನ್ ಅವರು ಹೇಳಿದ್ದಾರೆ.

ಗುರುವಾರ ಇಲ್ಲಿ ನಾನಿ ಪಾಲ್ಖಿವಾಲಾ ಸ್ಮಾರಕ ಉಪನ್ಯಾಸವನ್ನು ನೀಡಿದ ಅವರು,‘ನಾವು ನಮ್ಮ ಆರ್ಥಿಕ ಮತ್ತು ಉದ್ಯಮ ಸಂಸ್ಕೃತಿಯನ್ನು ಮರುರೂಪಿಸಬೇಕಾದ ಅಗತ್ಯವಿದೆ. ಸಂಸ್ಕೃತಿಯು ಅತ್ಯಂತ ಮಹತ್ವಪೂರ್ಣ ವಾದುದು. ಬೆಳವಣಿಗೆಯು ಒತ್ತಾಯದಿಂದ ಆಗಬಾರದು. ಬಾಧಕಗಳನ್ನು ನಿವಾರಿಸಿದರೆ ಅದು ತನ್ನಿಂತಾನೇ ನಡೆಯುತ್ತದೆ ಎಂದರು.

ನಮಗೆ ಮೇಲ್ವಿಚಾರಣೆ ಬೇಕೇ ಹೊರತು ನಮಗೆ ಸಂದೇಹದ ಅಗತ್ಯವಿಲ್ಲ. ಆದರೆ ದೇಶವು ಸಂದೇಹಗಳಿಂದ ತುಂಬಿಹೋಗಿದೆ. ನಮ್ಮ ಎಲ್ಲ ಕಾನೂನುಗಳು ಸಂದೇಹದಿಂದಲೇ ಆರಂಭಗೊಳ್ಳುತ್ತವೆ ಎಂದರು.

ದೇಶದಲ್ಲಿಯ ನಿರುದ್ಯೋಗವನ್ನೂ ಪ್ರಸ್ತಾಪಿಸಿದ ಚಂದ್ರಶೇಖರನ್,ಮುಖ್ಯವಾಗಿ ಸಮಾಜಕ್ಕೋಸ್ಕರ ಉದ್ಯೋಗಳನ್ನು ಖಚಿತಪಡಿಸುವ ಅಗತ್ಯವಿದೆ ಎಂದರು. ನೂತನ ದಶಕದಲ್ಲಿ ಒಂಭತ್ತು ಕೋಟಿ ಜನರು ದುಡಿಮೆಯ ವಯೋಗುಂಪಿಗೆ ಸೇರಲಿದ್ದಾರೆ ಎಂದು ಅವರು ಎಚ್ಚರಿಕೆಯನ್ನು ನೀಡಿದರು.

2025ರ ವೇಳೆಗೆ ಐದು ಲಕ್ಷ ಕೋಟಿ ಡಾ.ಆರ್ಥಿಕತೆಯನ್ನು ಸಾಧಿಸುವ ನರೇಂದ್ರ ಮೋದಿ ನೇತೃತ್ವದ ಸರಕಾರದ ಗುರಿಯ ಕುರಿತಂತೆ ಚಂದ್ರಶೇಖರನ್,ಸುಶಿಕ್ಷಿತ,ಕುಶಲ ಮತ್ತು ಉತ್ಸಾಹಿ ಕಾರ್ಯಪಡೆಯನ್ನು ಖಚಿತ ಪಡಿಸದೆ ಯಾವುದೇ ಗುರಿಯನ್ನು ಸಾಧಿಸಲಾಗುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News