ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕು: ಜಿಲ್ಲಾಧಿಕಾರಿ ಜಿ.ಜಗದೀಶ್

Update: 2020-01-17 17:03 GMT

ಉಡುಪಿ, ಜ.17:ವಿದ್ಯಾರ್ಥಿಗಳು ರೆಡ್‌ಕ್ರಾಸ್‌ನ ಧ್ಯೇಯ-ಉದ್ದೇಶಗಳನ್ನು ಅರಿತು, ತುರ್ತು ಸಂದರ್ಭಗಳಲ್ಲಿ ಸ್ವ-ಪ್ರೇರಣೆಯಿಂದ ನೆರವಿಗೆ ಧಾವಿಸುವ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಜಿ.ಜಗದೀಶ್ ಹೇಳಿದ್ದಾರೆ.

ಉಡುಪಿ ಅಜ್ಜರಕಾಡು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಮತ್ತು ಮಂಗಳೂರು ವಿವಿ ಸಹಭಾಗಿತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ರೆಡ್‌ಕ್ರಾಸ್ ಘಟಕದ ಪ್ರೋಗ್ರಾಮ್ ಆಫೀಸರ್ಸ್‌ ಮತ್ತು ಪ್ರಾಂಶುಪಾಲರುಗಳಿಗೆ ಒಂದು ದಿನದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅರು ಮಾತನಾಡುತಿದ್ದರು.

ರೆಡ್‌ಕ್ರಾಸ್ ಸಂಸ್ಥೆ ಯಾವುದೇ ಫಲಾಪೇಕ್ಷೆ ಇಲ್ಲದೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲಾ ರೆಡ್‌ಕ್ರಾಸ್‌ನ ಅಧಿಕಾರಿ ಗಳು ಉತ್ತಮ ಕೆಲಸಗಳನ್ನು ಮಾಡುತ್ತಿದ್ದು, ಇದೇ ರೀತಿಯಲ್ಲಿ ಎಲ್ಲಾ ಸಂಸ್ಥೆಗಳು ಉತ್ತಮ ಕೆಲಸಗಳನ್ನು ನಿರ್ವಹಿಸುವಂತಾಗಲಿ ಎಂದ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಜಿಲ್ಲೆಯಲ್ಲಿ ರೆಡ್‌ಕ್ರಾಸ್‌ನ ಸಮಾಜಮುಖಿ ಕೆಲಸಗಳಿಗೆ ದಾನಿಗಳು ಹೆಚ್ಚಿನ ಸಹಕಾರ ನೀಡುತ್ತಿದ್ದು, ಇದರ ಸದುಪಯೋಗ ಪಡೆಯುವಂತಾಗಬೇಕು. ಸಹಾಯದ ಅಗತ್ಯವಿದ್ದವರಿಗೆ ಸಕಾಲದಲ್ಲಿ ಸಹಕರಿಸಲು ರೆಡ್‌ಕ್ರಾಸ್ ಸಂಸ್ಥೆ ಸಿದ್ಧವಾಗಿದ್ದು, ಅದರಂತೆ ಯುವ ರೆಡ್‌ಕ್ರಾಸ್ ಸಂಸ್ಥೆಯು ಕಾರ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳು ರೆಡ್‌ಕ್ರಾಸ್‌ನ ಧ್ಯೇಯ-ಉದ್ದೇಶಗಳನ್ನು ಅರಿತು, ತುರ್ತು ಸಂಧರ್ಗಳಲ್ಲಿ ಸ್ವ-ಪ್ರೇರಣೆಯಿಂದ ನೆರವಿಗೆ ಧಾವಿಸಿ, ಸಮಾಜಮುಖಿ ಚಟುವಟಿಕೆಗಳಲ್ಲಿ ಬಾಗಿಯಾಗಬೇಕು ಎಂದರು.

ಕರ್ನಾಟಕ ರಾಜ್ಯ ಶಾಖೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಯುವ ರೆಡ್‌ಕ್ರಾಸ್ ಘಟಕದ ಡೈರೆಕ್ಟರ್ ನಾಗಶೇಖರ್ ಎಸ್ ಮಾತನಾಡಿ, ಯುವ ಜನತೆ ಭಾರತದ ಮುಂದಿನ ಶಕ್ತಿ. ತುರ್ತು ಪರಿಸ್ಥಿತಿಗಳಲ್ಲಿ ಸ್ವ-ಪ್ರೇರಣೆಯಿಂದ ಯಾವುದೇ ಪ್ರತಿಫಲಾ ಪೇಕ್ಷೆಯಿಲ್ಲದೇ ಸಂತ್ರಸ್ಥರಿಗೆ ಸಹಕರಿಸುವುದೇ ಯುವ ರೆಡ್‌ಕ್ರಾಸ್‌ನ ಮುಖ್ಯ ಉದ್ಧೇಶ ಎಂದು ಹೇಳಿದರು.

ಅಜ್ಜರಕಾಡು ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕದ ಸಭಾಪತಿ ಎಸ್.ಜಯಕರ ಶೆಟ್ಟಿ, ಜಿಲ್ಲಾ ಘಟಕದ ಗೌರವ ಖಜಾಂಜಿ ಟಿ. ಚಂದ್ರಶೇಖರ್, ಜೂನಿಯರ್ ರೆಡ್‌ಕ್ರಾಸ್‌ನ ನಿರ್ದೇಶಕ ಸಿಎನ್‌ಎನ್ ರಾಜು, ರಾಜ್ಯ ಶಾಖೆ ರೆಡ್‌ಕ್ರಾಸ್ ಸಂಸ್ಥೆ ಯುವ ರೆಡ್‌ಕ್ರಾಸ್ ಘಟಕ ಸಲಹೆಗಾರ ಎಚ್.ಎಸ್. ಸುರೇಶ್, ಕ್ರೀಡಾ ಮತ್ತು ಯುವ ಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಸ್ವಾಗತಿಸಿದರು. ಉಡುಪಿ ಯುವ ರೆಡ್‌ಕ್ರಾಸ್ ಘಟಕದ ನಿರ್ದೇಶಕ ಜಯರಾಮ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ವಿವಿ ರೆಡ್‌ಕ್ರಾಸ್‌ನ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News