ಉಡುಪಿ: ಜ.19ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ

Update: 2020-01-17 17:08 GMT

ಉಡುಪಿ, ಜ.17: ಉಡುಪಿ ರೋಟರಿ ಕ್ಲಬ್ ಮತ್ತು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಉದ್ಘಾಟನೆಯು ಜ.19ರ ರವಿವಾರ ಬೆಳಗ್ಗೆ 8 ಗಂಟೆಗೆ ಉಡುಪಿಯ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಜರುಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಜ.19ರಂದು ನಡೆಯುವ ಪಲ್ಸ್ ಪೊಲಿಯೋ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಒಟ್ಟು 74846 ಮಕ್ಕಳಿಗೆ (ಗ್ರಾಮೀಣ ಪ್ರದೇಶ 62,204, ನಗರ ಪ್ರದೇಶ 12,642) ಲಸಿಕೆ ನೀಡಲಿದ್ದು, ಇದಕ್ಕಾಗಿ ಉಡುಪಿ ಜಿಲ್ಲೆಯಲ್ಲಿ 658 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ (ಗ್ರಾಮೀಣ ಪ್ರದೇಶ 568, ನಗರ ಪ್ರದೇಶ 90). ಇದಲ್ಲದೆ 9 ಮೊಬೈಲ್ ತಂಡ ಮತ್ತು 37 ಟ್ರಾನ್ಸಿಟ್ ಬೂತ್‌ಗಳನ್ನು ತೆರೆದು 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ 2764 ಲಸಿಕಾ ಸ್ವಯಂ ಸೇವಕರು, 133 ಮೇಲ್ವಿಚಾರಕರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮವನ್ನು ಆರೋಗ್ಯ, ಪಂಚಾಯತ್ ರಾಜ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ ಇಲಾಖೆ ಮತ್ತು ಇತರ ಇಲಾಖೆ, ರೋಟರಿ ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ, ಜಿಲ್ಲಾಡಳಿತದ ಮಾರ್ಗದರ್ಶನದೊಂದಿಗೆ ನಡೆಸಲಾಗುವುದು.

ಸಾರ್ವಜನಿಕರು, ವಲಸೆ ಕಾರ್ಮಿಕರು, ಕೊಳಚೆ ನಿವಾಸಿಗಳು ತಮ್ಮ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋವನ್ನು ಜ.19ರಂದು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿ ಸಹಕರಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಜ.20 ಮತ್ತು 21ರಂದು ಹಾಗೂ ನಗರ ಪ್ರದೇಶದಲ್ಲಿ ಜ.20ರಿಂದ 22ರ ವರೆಗೆ ಸ್ವಯಂ ಸೇವಕರು ಮನೆ ಮನೆ ಭೇಟಿ ನೀಡಿ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋ ಹನಿ ಹಾಕಿಸಿದ ಬಗ್ಗೆ ಖಚಿತಪಡಿಸಿ ಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಪಡೆ ಸಮಿತಿ ಅಧ್ಯಕ್ಷ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News