ಎರಡು ಕಾರ್ಯ ಅಪೂರ್ಣ: ಪಲಿಮಾರುಶ್ರೀ

Update: 2020-01-17 17:12 GMT

ಉಡುಪಿ, ಜ.17: ಸಹಾಯ ಅರಸಿ ಬಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಬಡ ಅಶಕ್ತರಿಗೆ ವೈದ್ಯಕೀಯ ನೆರವಿನ ಹಸ್ತ ನೀಡಲು ತಮಗೆ ಎರಡು ವರ್ಷಗಳ ಎರಡನೇ ಪರ್ಯಾಯದ ಅವಧಿಯಲ್ಲಿ ಸಾಧ್ಯವಾಗಲಿಲ್ಲ. ಈ ಕೊರಗು ತಮ್ಮಲ್ಲಿ ಉಳಿದುಕೊಂಡಿದೆ ಎಂದು ಎರಡು ವರ್ಷಗಳ ಕಾಲ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿ ಶನಿವಾರ ಮುಂಜಾನೆ ಅದಮಾರುಶ್ರೀಗಳಿಗೆ ಕೃಷ್ಣಪೂಜಾ ಅಧಿಕಾರವನ್ನು ಹಸ್ತಾಂತರಿಸಿದ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಹೇಳಿದ್ದಾರೆ.

ಪೀಠಾವರೋಹಣ ಮಾಡುವ ಸಂದರ್ಭದಲ್ಲಿ ಕೊನೆಯ ಬಾರಿಗೆ ಕನಕ ಮಂಟಪದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ತನ್ನ ಎರಡು ವರ್ಷಗಳ ಸಾಧನೆಗಳ ಕುರಿತು ಮಾತನಾಡುತಿದ್ದರು.

ತಾನು ಎರಡು ವರ್ಷಗಳ ಕಾಲ ಪೂಜಿಸಿದ ಕೃಷ್ಣ ಎಲ್ಲರಿಗೂ, ಎಲ್ಲಾ ಜಾತಿ, ಮತ, ಪಂಥಗಳವರಿಗೆ ಸೇರಿದವನು. ಎಲ್ಲರಲ್ಲೂ ಆತ ನೆಲೆಸಿದ್ದಾನೆ. ಎಲ್ಲರ ಭಾವನೆಗಳಿಗೂ ಸ್ಪಂಧಿಸಿ ಉಡುಪಿಯಲ್ಲಿರುವ ಬಾಲಕೃಷ್ಣನ ಸೇವೆಗೆ ಎಲ್ಲರಿಗೂ ಅವಕಾಶ ನೀಡಲಾಗಿತ್ತು. ನನ್ನ ಯೋಜನೆಗಳಲ್ಲಿ ಎರಡು ಕನಸು ಈಡೇರದ ಕೊರಗು ಮಾತ್ರ ಉಳಿದುಕೊಂಡಿದೆ. ಹೀಗಾಗಿ ಈ ಕಾರ್ಯವನ್ನು ಇನ್ನು ಮುಂದೆ ಮುಂದುವರಿಸುವ ಇಚ್ಛೆ ತಮಗಿದೆ. ಸಹಾಯ ಯಾಚಿಸಿ ಬರುವ ವಿದ್ಯಾರ್ಥಿಗಳು ಹಾಗೂ ಅಸ್ವಸ್ಥರ ಮನವಿಗೆ ಸ್ಪಂಧಿಸಲು ಸಂಕಲ್ಪಿಸಿದ್ದೇನೆ ಎಂದರು. ಕೃಷ್ಣ ಗರ್ಭಗುಡಿಗೆ 40 ಕೋಟಿ ರೂ.ವೆಚ್ಚದಲ್ಲಿ ಚಿನ್ನದ ತಗಡು ಹೊದಿಕೆ, ಮುಖ್ಯಪ್ರಾಣನ ಗುಡಿಗೆ1.25 ಕೋಟಿ ರೂ.ವೆಚ್ಚದಲ್ಲಿ ಚಿನ್ನದ ಹೊದಿಕೆ ಹಾಸಲು ಸಾಧ್ಯವಾಗಿದೆ ಎಂದರು.

ಅಲ್ಲದೇ ಸಮಗ್ರ ಮಹಾಭಾರತವನ್ನು ಎರಡು ಕೋಟಿ ರೂ.ವೆಚ್ಚದಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ 61 ಸಂಪುಟಗಳಲ್ಲಿ ನೀಡಿರುವುದು ನನಗೆ ಅತ್ಯಂತ ಹೆಚ್ಚು ತೃಪ್ತಿ ನೀಡಿದೆ. ಈ ಸಂಪುಟಗಳು ಈಗ ಆಂಗ್ಲ ಹಾಗೂ ಹಿಂದಿ ಭಾಷೆಗಳಿಗೂ ತರ್ಜುಮೆ ಗೊಳ್ಳುತಿದ್ದು, ಅವೂ ಶೀಘ್ರವೇ ಬಿಡುಗಡೆಗೊಳ್ಳಲಿದೆ ಎಂದು ಪಲಿಮಾರುಶ್ರೀಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News