ಮಂಗಳೂರು: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

Update: 2020-01-17 17:18 GMT

ಮಂಗಳೂರು, ಜ.17: ಕರಾವಳಿ ಉತ್ಸವದ ಪ್ರಯುಕ್ತ ಮೂರು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಪಣಂಬೂರು ಕಡಲತೀರದಲ್ಲಿ ಶಾಸಕ ಭರತ್ ಶೆಟ್ಟಿ ಶುಕ್ರವಾರ ಸಂಜೆ ಚಾಲನೆ ನೀಡಿದರು.

ಚಿಕ್ಕ ಗಾಳಿಪಟಗಳಿಂದ ಹಿಡಿದು ಕೆಲವು ಮೀಟರ್‌ಗಳಷ್ಟು ಉದ್ದದ ಗಾಳಿಪಟಗಳು ಇನ್ನೂ ಮೂರು ದಿನಗಳ ಕಾಲ ಪಣಂಬೂರಿನಲ್ಲಿ ನೋಡುಗರ ಕಣ್ಮನ ಸೆಳೆಯಲಿವೆ. ಅಮೆರಿಕ, ಥೈಲ್ಯಾಂಡ್, ನೆದರ್‌ಲ್ಯಾಂಡ್ ಚೀನಾ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳಿಂದ ಗಾಳಿಪಟ ಹಾರಿಸುವವರು ಆಗಮಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಹಲವು ಗಾಳಿಪಟ ಹಾರಿಸುವವರು ಉತ್ಸವದಲ್ಲಿ ಪಾಲ್ಗೊಂಡು ತಾವು ತಂದ ಗಾಳಿಪಟಗಳ ಹಾರಾಟ ನಡೆಸಿದರು.

ಕುದುರೆ, ಮೊಸಳೆ, ವಿವಿಧ ಬಗೆಯ ಸಮುದ್ರ ಜೀವಿಗಳು, ಕೆಲವು ಹಣ್ಣು-ಹಂಪಲು ಮಾದರಿಗಳು ಸಮುದ್ರ ತೀರದ ನೀಲಿಯ ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತ ಹಕ್ಕಿಗಳಾದವು. ಹಾವಿನಾಕಾರದಲ್ಲಿ ಸುಯ್ಯನೆ ಗಾಳಿಯಲ್ಲಿ ಚುರುಕಾಗಿ ಓಡಾಡುವ ಭಾರೀ ಉದ್ದದ ಹಾವಿನಾಕಾರದ ಗಾಳಿಪಟವಂತೂ ನೋಡುಗರನ್ನು ಮೈನವಿರೇಳಿಸುತ್ತಾ ಸೆಳೆಯುತ್ತಿತ್ತು. ಚಿತ್ರ ವಿಚಿತ್ರ ಬಗೆಯ ಗಾಳಿಪಟಗಳನ್ನು ಹಾರಿಸಿ ಕರಾವಳಿಯ ಜನರನ್ನು ಸೆಳೆದರು.

ಥೈಲ್ಯಾಂಡ್ ಗಣಪತಿ ಗಾಳಿಪಟವೂ ವಿಶೇಷ ಆಕರ್ಷಣೆಗೆ ಪಾತ್ರವಾಯಿತು. ದೇಶ ವಿದೇಶಗಳ ಒಟ್ಟು 20 ತಂಡಗಳು ಭಾಗವಹಿ ಸಿವೆ. ಪ್ರತಿ ತಂಡಗಳೂ 10-15 ಗಾಳಿಪಟಗಳನ್ನು ತಂದಿದ್ದು, ಇನ್ನೆರಡು ದಿನಗಳ ಕಾಲ ಪಣಂಬಯುರು ಕಡಲತೀರದಲ್ಲಿ ನೂರಾರು ಗಾಳಿಪಟಗಳು ಜನರ ಮನಸ್ಸನ್ನು ಸೂರೆಗೊಳಿಸಲಿವೆ.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡುದ ಚೀನಾದ ಗಾಳಿಪಟ ಹಾರಾಟಗಾರ ತೇನ್ ಜಿಂಬೊ, ‘ಈ ಉತ್ಸವ ಆಯೋಜಿಸಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಗಾಳಿಪಟ ಉತ್ಸವಗಳಿಂದ ವಿವಿಧ ದೇಶಗಳ ಜನರ ನಡುವೆ ಬಾಂಧವ್ಯ ವೃದ್ಧಿಸುತ್ತದೆ. ಇಂಥ ಉತ್ಸವಗಳನ್ನು ಇನ್ನೂ ಹೆಚ್ಚುನ ಸಂಖ್ಯೆಯಲ್ಲಿ ನೆರವೇರಿಸಬೇಕು’ ಎಂದು ಅಭಿಪ್ರಾಯ ಹಂಚಿಕೊಂಡರು.

ಕೈಟ್ ಕಪಲ್: ಪತಿ ಅಮೆರಿಕದವರಾದರೆ ಪತ್ನಿ ಥೈಲ್ಯಾಂಡ್‌ನವರು. ಗಾಳಿಪಟ ಹಾರಾಟದಿಂದಲೇ ಗೆಳೆತನವಾಗಿ ವಿವಾಹವಾದವರು. ರೋನ್ ಸ್ಪೌಲ್ಡಿಂಗ್, ಬೇವ್ ಸ್ಪೌಲ್ಡಿಂಗ್. ಭಾರತಕ್ಕೆ 10 ಸಲ ಬಂದಿದ್ದಾರೆ. ಮಂಳೂರಿಗೆ ಮೊದಲ ಬಾರಿ ಬಂದಿದ್ದ ಅವರು, ಮಂಗಳೂರಿನ ವಾತಾವರಣ ಸಂಸ್ಕೃತಿಯ ಬಗ್ಗೆಯೂ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡುವ ಸಂದರ್ಭ ಮೂಡಾ ಆಯುಕ್ತ ಶ್ರೀಕಾಂತ್, ಕಂದಾಯ ಉಪ ಆಯುಕ್ತೆ ಗಾಯತ್ರಿ ನಾಯಕ್, ಆರ್‌ಎಫ್‌ಒ ಶ್ರೀಧರ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News