×
Ad

ವಾಟ್ಸ್‌ಆ್ಯಪ್‌ನಲ್ಲಿ ಜಾಹೀರಾತು ಮಾರಾಟ ಮಾಡದಿರಲು ಫೇಸ್‌ಬುಕ್ ನಿರ್ಧಾರ?

Update: 2020-01-17 23:01 IST

ಸಾನ್‌ಫ್ರಾನ್ಸಿಸ್ಕೊ (ಅಮೆರಿಕ), ಜ. 17: ಜನಪ್ರಿಯ ಸಂದೇಶವಾಹಕ ತಾಣ ವಾಟ್ಸ್‌ಆ್ಯಪ್‌ನಲ್ಲಿ ಜಾಹೀರಾತುಗಳನ್ನು ಮಾರಾಟ ಮಾಡದಿರಲು ಅದರ ಮಾತೃ ಕಂಪೆನಿ ಫೇಸ್‌ಬುಕ್ ನಿರ್ಧರಿಸಿದೆ ಎನ್ನಲಾಗಿದೆ. ಈ ಪ್ರಸ್ತಾಪವನ್ನು ವಿರೋಧಿಸಿ ವಾಟ್ಸ್‌ಆ್ಯಪ್‌ನ ಸಂಸ್ಥಾಪಕರಾದ ಬ್ರಯಾನ್ ಆ್ಯಕ್ಟನ್ ಮತ್ತು ಜಾನ್ ಕೌಮ್ ಸುಮಾರು ಎರಡು ವರ್ಷಗಳ ಹಿಂದೆಯೇ ವಾಟ್ಸ್‌ಆ್ಯಪ್‌ನಿಂದ ಹೊರಬಂದಿದ್ದಾರೆ.

 ವಾಟ್ಸ್‌ಆ್ಯಪ್ ಸೇವೆಯಲ್ಲಿ ಜಾಹೀರಾತುಗಳನ್ನು ಹೊಂದಿಸುವ ಉತ್ತಮ ವಿಧಾನಗಳನ್ನು ಪರಿಶೀಲಿಸುವುದಕ್ಕಾಗಿ ರಚಿಸಲಾಗಿದ್ದ ತಂಡವೊಂದನ್ನು ಇತ್ತೀಚಿನ ತಿಂಗಳುಗಳಲ್ಲಿ ಬರ್ಖಾಸ್ತು ಮಾಡಲಾಗಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

‘‘ಆ ತಂಡ ಮಾಡಿದ ಕೆಲಸವನ್ನು ಬಳಿಕ ವಾಟ್ಸ್‌ಆ್ಯಪ್‌ನ ಕೋಡ್‌ನಿಂದ ಅಳಿಸಿಹಾಕಲಾಗಿತ್ತು’’ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ವಾಟ್ಸ್‌ಆ್ಯಪ್‌ನಿಂದ ಹಣ ಮಾಡಲು ಹಾಗೂ ಅದರ ಎನ್‌ಕ್ರಿಪ್ಶನ್ ತಂತ್ರಜ್ಞಾನವನ್ನು ದುರ್ಬಲಗೊಳಿಸಲು ಫೇಸ್‌ಬುಕ್ ಮಾಲೀಕ ಮಾರ್ಕ್ ಝುಕರ್‌ಬರ್ಗ್ ಆತುರದಲ್ಲಿದ್ದಾರೆ ಎಂಬುದಾಗಿ ವಾಟ್ಸ್‌ಆ್ಯಪ್ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಆ್ಯಕ್ಟನ್ ‘ಫೋರ್ಬ್ಸ್’ ಪತ್ರಿಕೆಗೆ ನೀಡಿರುವ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಹಣ ಮಾಡುವತ್ತ ಮಾತ್ರ ಫೇಸ್‌ಬುಕ್ ಗಮನ: ಪೆಲೋಸಿ

ವಾಶಿಂಗ್ಟನ್, ಜ. 17: ಫೇಸ್‌ಬುಕ್ ಅಮೆರಿಕದ ಜನತೆಯನ್ನು ತಪ್ಪುದಾರಿಗೆಳೆಯುತ್ತಿದೆ ಹಾಗೂ ಆ್ಯಂಟಿ ಟ್ರಸ್ಟ್ ಆ್ಯಕ್ಷನ್‌ನಿಂದ ಪಾರಾಗಲು ಡೊನಾಲ್ಡ್ ಟ್ರಂಪ್ ಸರಕಾರವನ್ನು ಓಲೈಸುತ್ತಿದೆ ಎಂದು ಅಮೆರಿಕದ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಆರೋಪಿಸಿದ್ದಾರೆ.

ಗುರುವಾರ ತನ್ನ ವಾರದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪೆಲೋಸಿ, ತಂತ್ರಜ್ಞಾನದಿಂದ ಪಡೆದುಕೊಳ್ಳಲಾಗಿರುವ ಶ್ರೇಷ್ಠ ಅವಕಾಶವೊಂದನ್ನು ಫೇಸ್‌ಬುಕ್ ದುರುಪಯೋಗಗೊಳಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

‘‘ತೆರಿಗೆ ರಿಯಾಯಿತಿಗಳನ್ನು ಪಡೆದುಕೊಳ್ಳಲು ಹಾಗೂ ತನ್ನ ವಿರುದ್ಧದ ಆ್ಯಂಟಿ ಟ್ರಸ್ಟ್ ಆ್ಯಕ್ಷನ್‌ನಿಂದ ವಿನಾಯಿತಿ ಪಡೆಯಲು ಅವರು ಬಯಸಿದ್ದಾರೆ. ಹಾಗಾಗಿ, ಅವರು ಸರಕಾರವನ್ನು ಓಲೈಸುತ್ತಿದ್ದಾರೆ’’ ಎಂದು ಪೆಲೋಸಿ ನುಡಿದರು.

ಫೇಸ್‌ಬುಕ್ ಮತ್ತು ಅದರ ಸಿಇಒ ಅಗಾಧ ಪ್ರಭಾವವನ್ನು ಹೊಂದಿದ್ದಾರೆಯೇ ಎಂಬ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News