ಪೊಲೀಸ್ ಕಾನ್ ಸ್ಟೇಬಲ್ ಗೆ ಹಲ್ಲೆ ಪ್ರಕರಣ: ಆರೋಪಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು

Update: 2020-01-17 17:33 GMT

ಬಂಟ್ವಾಳ, ಜ. 17: ಕೊಲೆಯತ್ನ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಯೋರ್ವನ  ಬಂಧನಕ್ಕೆ ತೆರಳಿದ್ದ ಪೊಲೀಸ್ ಕಾನ್ ಸ್ಟೇಬಲ್ ರೊಬ್ಬರಿಗೆ ಹಲ್ಲೆಗೈದು, ತಳ್ಳಿಹಾಕಿದ ಪರಿಣಾಮ ಕಾಲಿನ ಮೂಳೆಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳಕ್ಕೆ ಸಮೀಪದ ಸಿದ್ದಕಟ್ಟೆಯ ಕೆರೆಬಳಿ ಗುರುವಾರ ರಾತ್ರಿ ನಡೆದಿದೆ.

ಪೊಲೀಸ್ ಕಾನ್ ಸ್ಟೇಬಲ್  ಮಹೇಂದ್ರ  ಎಂಬವರ ಎಡ ಕಾಲಿನ ಮೂಳೆಗೆ ಗಾಯವಾಗಿದೆ. ತುಂಬೆ ರಾಮಲ್ ಕಟ್ಟೆ ನಿವಾಸಿ ನವಾಝ್ (42) 2015 ರಲ್ಲಿ ನಡೆದ ಕೊಲೆಯತ್ನ ಪ್ರಕರಣವೊಂದರ ಆರೋಪಿ. ಈತ ಕೊಲೆ ಪ್ರಕರಣವೊಂದರಲ್ಲಿ ಜಾಮೀನು ಪಡೆದ ಬಳಿಕ  ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಇತ್ತೀಚೆಗೆ ಸಿದ್ದಕಟ್ಟೆ ಪರಿಸರದಲ್ಲಿ ತಿರುಗಾಡುತ್ತಿದ್ದಾಗ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿಯ ಮೇರೆಗೆ ಸಿದ್ದಕಟ್ಟೆ ಹೊರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಕಾನ್ ಸ್ಟೇಬಲ್ ಗಳಾದ ಮಹೇಂದ್ರ, ರವಿ, ಮಾಧವ ಎಂಬವರು ಆರೋಪಿಯನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ಆರೋಪಿಯು ಪೊಲೀಸ್ ಸಿಬ್ಬಂದಿ ಮಹೇಂದ್ರ ಎಂಬವರನ್ನು ತಗ್ಗು ಪ್ರದೇಶಕ್ಕೆ ತಳ್ಳಿ ಹಾಕಿ ಪರಾರಿಯಾಗಲು  ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ‌.

ಈ ಸಂದರ್ಭ ಇನ್ನಿಬ್ಬರು ಸಿಬ್ಬಂದಿ ಮಾದವ ಮತ್ತು ರವಿ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಯಿಂದ ಕಾನ್ ಸ್ಟೇಬಲ್  ಮಹೇಂದ್ರ ಅವರ ಎಡ ಕಾಲಿನ ಮೂಳೆ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆ ಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆ ಆರೋಪಿಯ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News