ಚೀನಾದ ಜನನ ದರ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿ

Update: 2020-01-17 17:38 GMT

ಬೀಜಿಂಗ್, ಜ. 17: ಚೀನಾದ ಜನನ ದರವು ಕಳೆದ ವರ್ಷ 1949ರಲ್ಲಿ ದೇಶ ಸ್ಥಾಪನೆಯಾದಂದಿನಿಂದ ಕನಿಷ್ಠ ಮಟ್ಟವನ್ನು ತಲುಪಿದೆ. ಇದು ವೃದ್ಧರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿ ಕೆಲಸ ಮಾಡುವವರ ಸಂಖ್ಯೆಯ ಇಳಿಕೆಗೆ ಕಾರಣವಾಗಬಹುದು ಹಾಗೂ ಆ ನಿಧಾನಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆ ಮೇಲೆ ಒತ್ತಡ ಹೇರಬಹುದು ಎಂಬ ಭೀತಿಗೆ ಕಾರಣವಾಗಿದೆ.

ಜನಸಂಖ್ಯೆಯಲ್ಲಿನ ಅಸಮಾನತೆಯನ್ನು ತಡೆಗಟ್ಟುವುದಕ್ಕಾಗಿ ಚೀನಾವು 2016ರಲ್ಲಿ ತನ್ನ ಒಂದೇ-ಮಗು ನೀತಿಯನ್ನು ಸಡಿಲಿಸಿ, ದಂಪತಿಯೊಂದಕ್ಕೆ ಎರಡು ಮಕ್ಕಳನ್ನು ಹೊಂದಲು ಅವಕಾಶ ನೀಡಿತ್ತು. ಆದರೆ, ಆ ಬದಲಾವಣೆಯಿಂದ ಮಕ್ಕಳ ಸಂಖ್ಯೆಯಲ್ಲೇನೂ ಹೆಚ್ಚಳವಾಗಿಲ್ಲ.

2019ರಲ್ಲಿ ಜನನ ದರವು 1,000 ಜನರಿಗೆ 10.48 ಆಗಿತ್ತು ಎಂದು ರಾಷ್ಟ್ರೀಯ ಅಂಕಿಸಂಖ್ಯೆ ಸಂಸ್ಥೆಯು ಶುಕ್ರವಾರ ಬಿಡುಗಡೆ ಮಾಡಿದ ಅಂಕಿಅಂಶವು ತಿಳಿಸಿದೆ.

ಚೀನಾದಲ್ಲಿ ಸತತ ಮೂರು ವರ್ಷಗಳಿಂದಲೂ ಜನನ ದರವು ಕುಸಿಯುತ್ತಾ ಬಂದಿದೆ.

2019ರಲ್ಲಿ ಚೀನಾದಲ್ಲಿ 1.46 ಕೋಟಿ ಮಕ್ಕಳು ಜನಿಸಿವೆ. 2018ರಲ್ಲಿ 1.52 ಕೋಟಿ ಮಕ್ಕಳು ಜನಿಸಿದ್ದರೆ, 2017ರಲ್ಲಿ 1.72 ಕೋಟಿ ಮಕ್ಕಳು ಜನಿಸಿವೆ.

ಆದರೂ, ಚೀನಾದ ಜನಸಂಖ್ಯೆ 2019ರ ಕೊನೆಯ ವೇಳೆಗೆ 140 ಕೋಟಿಯನ್ನು ತಲುಪಿದೆ. ಇದು ಹಿಂದಿನ ವರ್ಷಕ್ಕಿಂತ 46.7 ಲಕ್ಷ ಅಧಿಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News