ಕೇರಳಿಗರ ಮೇಲೆ ಅನುಮಾನಿಸುವ ಪೊಲೀಸರ ಕ್ರಮ ಖಂಡನೀಯ: ಮುನೀರ್ ಕಾಟಿಪಳ್ಳ

Update: 2020-01-18 17:21 GMT

ಮಂಗಳೂರು : ಡಿ.19ರ ಮಂಗಳೂರು ಹಿಂಸಾಚಾರಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸ್ ಆಯುಕ್ತಾಲಯವು ಕರ್ನಾಟಕ-ಕೇರಳದ ಗಡಿನಾಡಿಗರ ಮೇಲೆ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸುತ್ತಿರುವ ಕ್ರಮ ಖಂಡನೀಯ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಟವರ್ ಮೂಲಕ ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಡಿ.19ರಂದು ಮುಂಜಾನೆಯಿಂದ ರಾತ್ರಿಯವರೆಗೆ ಮಂಗಳೂರಿನಲ್ಲಿ ಬೇರೆ ಬೇರೆ ಕಾರಣಕ್ಕೆ ಬಂದು ಹೋಗಿದ್ದ ಮಂಜೇಶ್ವರ, ಕುಂಜತ್ತೂರು, ಉಪ್ಪಳ, ಹೊಸಂಗಡಿ, ಕಾಸರಗೋಡು ಮೂಲದ ವಿದ್ಯಾರ್ಥಿಗಳು, ವೈದ್ಯರ ಭೇಟಿಗೆ ಆಗಮಿಸಿದವರು, ಬಂದರಿನ ಅಂಗಡಿಗಳಲ್ಲಿ ಕೆಲಸ ಮಾಡುವವರು, ಕೂಲಿಗಳು, ಹಳ್ಳಿಗಳಲ್ಲಿ ಮೀನು ಮಾರಾಟ ಮಾಡಲು ಮೀನುಗಾರಿಕೆಗಾಗಿ ಧಕ್ಕೆಗೆ ಖರೀದಿಗೆ ಬಂದ ವ್ಯಾಪಾರಿಗಳು, ಬ್ಯಾಂಕ್ ಮುಂತಾದ ಸಂಸ್ಥೆಗಳ ಉದ್ಯೋಗಿಗಳಿಗೆ, ಮಹಿಳೆಯರಿಗೆ ಜಾತಿ, ಮತ ಭೇದವಿಲ್ಲದೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಏಕಕಾಲಕ್ಕೆ ಪೊಲೀಸ್ ನೋಟಿಸ್ ಪಡೆದ ಸಾವಿರಾರು ಮಂದಿ ಗಾಬರಿಗೊಂಡಿದ್ದು, ಹಲವರು ಕೆಲಸ ಕಾರ್ಯ ಬಿಟ್ಟು ಪೊಲೀಸರ ಮುಂದೆ ಹಾಜರಾಗುವಂತಾಗಿದೆ. ಹೆಚ್ಚಿನವರು ತಮ್ಮದಲ್ಲದ ತಪ್ಪಿಗೆ ಕೆಲಸ ಕಾರ್ಯ ಬಿಟ್ಟು ಠಾಣೆಯ ಮುಂದೆ ಭಯದಿಂದ ಸಮಯ ಕಳೆಯುವಂತಾಗಿದೆ ಎಂದು ಹೇಳಿದರು.

ಈ ನೋಟಿಸ್‌ನಲ್ಲಿ ಕೊಲೆಯತ್ನ, ಅಕ್ರಮ ಕೂಟ, ಗಲಭೆಗೆ ಪ್ರಚೋದನೆ ಮುಂತಾದ ಗಂಭೀರ ಸೆಕ್ಷನ್‌ಗಳನ್ನು ನಮೂದಿಸಲಾಗಿದೆ. ಪೊಲೀಸರು ನೈಜ ತಪ್ಪಿತಸ್ಥರನ್ನು ಪತ್ತೆ ಹಚ್ಚಲು ವೈಜ್ಞಾನಿಕ ವಿಧಾನ ಅಳವಡಿಸಿದರೆ ಸ್ವಾಗತಿಸಬಹುದಿತ್ತು. ಆದರೆ, ಕೇರಳಿಗರು ಎಂಬ ಏಕೈಕ ಕಾರಣಕ್ಕೆ ಅಮಾಯಕರ ಮೇಲೆ ಅನುಮಾನ ವ್ಯಕ್ತಪಡಿಸಿ ತನಿಖೆಗೊಳಪಡಿಸುವ ಕ್ರಮ ಒಪ್ಪತಕ್ಕದ್ದಲ್ಲ. ಪೊಲೀಸ್ ಆಯುಕ್ತರು ತಕ್ಷಣ ಈ ಪ್ರಕ್ರಿಯೆಯನ್ನು ಕೈ ಬಿಡಬೇಕು. ಇಲ್ಲದಿದ್ದರೆ ಪ್ರಬಲ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News