ಮಂಗಳೂರು: ಕ್ರಿಸ್ಮಸ್ ಸೌಹಾರ್ದ ಕೂಟ

Update: 2020-01-18 17:24 GMT

ಮಂಗಳೂರು, ಜ.18: ‘ನಮ್ಮ ಧರ್ಮ ನಮ್ಮೊಂದಿಗೆ... ನಮ್ಮ ಸ್ನೇಹ ಎಲ್ಲರೊಂದಿಗೆ...’ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ‘ಸದ್ಭಾವನಾ ವೇದಿಕೆ ಜಪ್ಪು ವರ್ತುಲ’ ಇದರ ವತಿಯಿಂದ 5ನೆ ವರ್ಷದ ಕ್ರಿಸ್ಮಸ್ ಸೌಹಾರ್ದ ಕೂಟವು ಶನಿವಾರ ನಗರದ ಮೋರ್ಗನ್‌ಗೇಟ್ ಕಾಸಿಯಾ ಚರ್ಚ್ ಹಾಲ್‌ನಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪ್ರೀಸ್ಟ್ ಆಫ್ ಕಾಸ್ಸಿಯಾ ಚರ್ಚ್‌ನ ಧರ್ಮಗುರು ಫಾ. ಹೆರಾಲ್ಡ್ ಮಸ್ಕರೇಂನಸ್ ‘ಎನ್‌ಆರ್‌ಸಿ, ಎನ್‌ಪಿಆರ್, ಸಿಎಎ ವಿರುದ್ಧದ ಹೋರಾಟ, ಅತ್ಯಾಚಾರ ಪ್ರಕರಣ, ಅಮಾಯಕರ ಮೇಲೆ ದೌರ್ಜನ್ಯ ಹೀಗೆ ದೇಶದ ಎಲ್ಲೆಡೆ ಒಂದಲ್ಲೊಂದು ಕಾರಣಕ್ಕೆ ಕ್ಷೋಭೆಯಿದೆ. ಮಾನವೀಯತೆ ಕಳಕೊಂಡವರಂತೆ ಮನುಷ್ಯರು ವರ್ತಿಸುತ್ತಿದ್ದಾರೆ. ಪ್ರತಿಯೊಂದು ವಿಷಯಕ್ಕೂ ಮಾನವ ಹಿಂಸಾರೂಪ ತಾಳುತ್ತಿದ್ದಾನೆ. ಮಾನವೀಯತೆ ಕಳೆದು ಹೋಗಿದೆ ಎಂಬ ವಾತಾವರಣ ಸೃಷ್ಟಿಯಾಗಿದೆ. ಇಂತಹ ಸಂದರ್ಭ ಶಾಂತಿ, ದಯೆ, ಕರುಣೆಗೆ ಒತ್ತುಕೊಟ್ಟ ಏಸುಕ್ರಿಸ್ತರ ಬದುಕು ನಮಗೆ ಆದರ್ಶವಾಗಬೇಕಿದೆ ಎಂದು ಹೇಳಿದರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮಾತನಾಡಿದರು. ಜೇಸನ್ ಪೀಟರ್ ಡಿಸೋಜ ಬಳಗದಿಂದ ಕ್ರಿಸ್ಮಸ್ ಸಂದೇಶ ಸಾರಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಜೇಸನ್ ಪೀಟರ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

ಕೇಶವ ಭಟ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಾಲೆಹ್ ಮುಹಮ್ಮದ್ ವಂದಿಸಿದರು. ಬಿಎ ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News