ಸಿಎಎ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರಕಾರ: ವರದಿ ಕೋರಿದ ರಾಜ್ಯಪಾಲ

Update: 2020-01-19 15:08 GMT

ತಿರುವನಂತಪುರ, ಜ. 19: ಪೌರತ್ವ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಕಳೆದ ವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ವರದಿ ಸಲ್ಲಿಸುವಂತೆ ಕೇರಳ ಸರಕಾರಕ್ಕೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸೂಚಿಸಿದ್ದಾರೆ.

ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳಿಸುವ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ರಾಜ್ಯಪಾಲ ಖಾನ್, ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ತನ್ನ ನಿರ್ಧಾರದ ಬಗ್ಗೆ ರಾಜ್ಯ ಸರಕಾರ ತಿಳಿಸದೇ ಇರುವುದು ಅನುಚಿತ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮುನ್ನ ಮಾಹಿತಿ ನೀಡದಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಕಚೇರಿ ವರದಿ ಕೋರಿ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದೆ ಎಂದು ಅವು ತಿಳಿಸಿವೆ.

ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರುವ ಹಕ್ಕು ರಾಜ್ಯ ಸರಕಾರಕ್ಕಿದೆ. ಆದರೆ, ತನಗೆ ಮಾಹಿತಿ ನೀಡದೇ ಇರುವುದು ಸರಿಯಲ್ಲ ಎಂದು ಈ ಹಿಂದೆ ರಾಜ್ಯಪಾಲ ಖಾನ್ ಹೇಳಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಮನವಿ ಸಲ್ಲಿಸುವ ಮೂಲಕ ಕೇರಳ ಮೊದಲ ರಾಜ್ಯವಾಗಿ ಪರಿಗಣಿತವಾಗಿದೆ. ಈ ಮನವಿ ಹಾಗೂ ಇದೇ ರೀತಿ ಇತರರು ಸಲ್ಲಿಸಿದ 60ಕ್ಕೂ ಅಧಿಕ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News