ನೂತನ ಬಿಜೆಪಿ ಅಧ್ಯಕ್ಷರ ನೇಮಕ: ಜೆ.ಪಿ.ನಡ್ಡಾಗೆ ಪಟ್ಟ ಒಲಿಯುವ ನಿರೀಕ್ಷೆ

Update: 2020-01-19 15:59 GMT

ಹೊಸದಿಲ್ಲಿ,ಜ.19: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸೋಮವಾರ ಹುದ್ದೆಯನ್ನು ತೆರವುಗೊಳಿಸಲಿದ್ದು, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಪಕ್ಷದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ.

ರಾಜ್ಯಗಳ ನಾಯಕರು ಸೇರಿದಂತೆ ಪಕ್ಷದ ಹಿರಿಯ ನಾಯಕರು ನಡ್ಡಾರನ್ನು ಬೆಂಬಲಿಸಿ ನಾಮಪತ್ರಗಳನ್ನು ಸಲ್ಲಿಸಲು ಬಿಜೆಪಿ ಕೇಂದ್ರಕಚೇರಿಗೆ ಆಗಮಿಸಲಿದ್ದಾರೆ. ಹಿಮಾಚಲ ಪ್ರದೇಶದ ನಡ್ಡಾರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಶಾ ಅವರ ಆಯ್ಕೆ ಎಂದು ಹಿಂದಿನಿಂದಲೂ ಭಾವಿಸಲಾಗಿದೆ.

 ವಿದ್ಯಾರ್ಥಿ ರಾಜಕೀಯದಿಂದ ಆರಂಭಿಸಿ ಸಂಘಟನೆಯಲ್ಲಿ ದಶಕಗಳ ಅನುಭವ,ಆರೆಸ್ಸೆಸ್‌ನ ಸಾಮೀಪ್ಯ ಮತ್ತು ಸ್ವಚ್ಛ ವ್ಯಕ್ತಿತ್ವ ನಡ್ಡಾ ಅವರಲ್ಲಿಯ ಧನಾತ್ಮಕ ಅಂಶಗಳಾಗಿವೆ. ರಾಷ್ಟ್ರೀಯ ಅಧ್ಯಕ್ಷ ಹುದ್ದೆಗಾಗಿ ಜ.20ರಂದು ನಾಮಪತ್ರಗಳು ಸಲ್ಲಿಕೆಯಾಗಲಿವೆ ಮತ್ತು ಅಗತ್ಯವಾದರೆ ಜ.21ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಪ್ರಕ್ರಿಯೆಯ ಉಸ್ತುವಾರಿಯಾಗಿರುವ ಹಿರಿಯ ಬಿಜೆಪಿ ನಾಯಕ ರಾಧಾಮೋಹನ ಸಿಂಗ್ ಅವರು ರವಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಯಾವುದೇ ಸ್ಪರ್ಧೆಯಿಲ್ಲದೆ ಒಮ್ಮತದಿಂದ ಪಕ್ಷಾಧ್ಯಕ್ಷರನ್ನು ಆಯ್ಕೆ ಮಾಡುವ ಸಂಪ್ರದಾಯ ಬಿಜೆಪಿಯಲ್ಲಿದ್ದು,ಈ ಬಾರಿಯೂ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆಯಿದೆ.

ನೂತನ ಅಧ್ಯಕ್ಷರ ಆಯ್ಕೆಯೊಂದಿಗೆ ಶಾ ಅವರ ಐದೂವರೆ ವರ್ಷಗಳ ಅಧಿಕಾರಾವಧಿ ಅಂತ್ಯಗೊಳ್ಳಲಿದೆ. ನಡ್ಡಾ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿ ಕಳೆದ ವರ್ಷದ ಜುಲೈನಲ್ಲಿ ನೇಮಕಗೊಂಡಿದ್ದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಪಕ್ಷದ ಪ್ರಚಾರ ಅಭಿಯಾನದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಮೋದಿ ಸರಕಾರದ ಮೊದಲ ಅಧಿಕಾರಾವಧಿಯಲ್ಲಿ ಸಂಪುಟ ದರ್ಜೆಯ ಸಚಿವರಾಗಿದ್ದ ಅವರು ಪಕ್ಷದ ಸಂಸದೀಯ ಮಂಡಳಿಯ ಸದಸ್ಯರೂ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News