ಧಾರ್ಮಿಕ ಪೀಠಗಳಿಂದ ಮಾತ್ರ ಸಮಾಜಕ್ಕೆ ಸಂಸ್ಕಾರ ನೀಡಲು ಸಾಧ್ಯ: ಡಿವಿಎಸ್

Update: 2020-01-19 16:05 GMT

ಉಡುಪಿ, ಜ.19: ವ್ಯವಸ್ಥೆಯ ಭದ್ರಬುನಾದಿಗಳಾದ ಸಂಸ್ಕೃತಿ, ಸಂಸ್ಕಾರ, ಪ್ರೀತಿ, ವಿಶ್ವಾಸವನ್ನು ಧಾರ್ಮಿಕ ಪೀಠಗಳು ಮಾತ್ರ ಸಮಾಜಕ್ಕೆ ನೀಡಲು ಸಾಧ್ಯ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ರವಿವಾರ ರಾಜಾಂಗಣದಲ್ಲಿ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತಿದ್ದರು.

ಹಿಂದಿನ ಕಾಲದಲ್ಲಿ ಪ್ರತಿ ರಾಜನಿಗೂ ರಾಜಗುರುಗಳಿದ್ದರು. ಕಾಲ ಕಾಲಕ್ಕೆ ಅವರು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಇಂದಿನ ಕಾಲದಲ್ಲಿ ಮಠ ಮಂದಿರಗಳ ಧಾರ್ಮಿಕ ವಾತಾವರಣ ಜವಾಬ್ದಾರಿಗಳನ್ನು ನೆನಪಿಸುತ್ತವೆ ಎಂದು ಅವರು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಅಧ್ಯಾತ್ಮಿಕ ಬದುಕು ಪ್ರತಿಯೊಬ್ಬರಿಗೂ ಬೇಕಾಗುತ್ತದೆ. ಪರ್ಯಾಯ ಸ್ವಾಮೀಜಿ ತೆಗೆದುಕೊಳ್ಳುವ ಪರಿಸರಕ್ಕೆ ಪೂರಕ ನಿಲುವುಗಳು ಸಮಾಜದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಲಿವೆ. ರಾಜಕಾರಣಿಗಳ ಮಾತಿಗಿಂತ ಸಂತರ ಮಾತಿಗೆ ಹೆಚ್ಚು ಮತ್ವ ನೀಡಬೇಕಾಗುತ್ತದೆ ಎಂದರು.

ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಎಲ್ಲಾ ವ್ಯಕ್ತಿಗಳಲ್ಲಿರುವ ಒಳ್ಳೆಯ ಗುಣಗಳನ್ನು ಸ್ವೀಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಇಡೀ ಜಗತ್ತು ನಮ್ಮ ಬಂಧು ವಾಗಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾಧಕರಾದ ಉದಯ ತಂತ್ರಿ, ಗಣಪತಿ ಭಟ್, ಯು. ದಾಮೋದರ್ ಅವರಿಗೆ ಕೃಷ್ಣಸೇವೆ ಪ್ರಸ್ತಿಯನ್ನು ಪ್ರದಾನ ಮಾಡಲಾಯಿತು. ಮಾಜಿ ಸಂಸದ ಅಶೋಕ್ ತನ್ವರ್, ಶಾಸಕ ರಘುಪತಿ ಭಟ್, ಶಾರದಾ ವಿದ್ಯಾಲಯ ಮುಖ್ಯಸ್ಥ ಎಂ.ಬಿ. ಪುರಾಣಿಕ್, ಎನ್‌ಎಂಪಿಟಿ ಅಧ್ಯಕ್ಷ ಎ.ವಿ. ರಮಣ, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ನ ಟಿ.ಸತೀಶ್ ಪೈ, ಮುಂಬೈನ ಡಾ.ಎಂ.ಎಸ್.ಆಳ್ವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News