ಕ್ಲಿಷ್ಟಕರ ವಿಚಾರದಲ್ಲಿ ಕ್ರೈಸ್ತ ಸಮುದಾಯ ಮೌನ ವಹಿಸದೆ ಎಚ್ಚೆತ್ತುಕೊಳ್ಳಲಿ: ಮಂಗಳೂರು ಬಿಷಪ್

Update: 2020-01-19 16:39 GMT

ಉಡುಪಿ, ಜ.19: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ರವಿವಾರ ಕಲ್ಯಾಣಪುರದ ಮೌಂಟ್ ರೋಜರಿ ಚರ್ಚಿನ ಮೈದಾನದಲ್ಲಿ ಆಯೋಜಿಸಲಾದ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಸಮುದಾಯೋತ್ಸವ- 2020 ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

 ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಪೀಟರ್ ಪಾವ್ಲ್ ಸಲ್ಡಾನಾ, ಸಾಧಕರಾದ ಪತ್ರಕರ್ತ ಜಾನ್ ಡಿಸೋಜ ಕುಂದಾಪುರ , ಪ್ರಗತಿಪರ ಕೃಷಿಕ ಜೂಲಿಯನ್ ದಾಂತಿ, ಸಮಾಜ ಸೇವಕ ರೋಶನ್ ಡಿಸೋಜ ಬೆಳ್ಮಣ್, ನಾಟಿ ವೈದ್ಯ ಜೆರೋಮ್ ಫ್ರಾನ್ಸಿಸ್ ಅಂದ್ರಾದೆ ಕಲ್ಮಾಡಿ ಹಾಗೂ ಸಹಕಾರಿ ಧುರೀಣ ಜಾನ್ ಡಿಸಿಲ್ವಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಮಂಗಳೂರು ಬಿಷಪ್, ಕ್ರೈಸ್ತ ಸಮುದಾಯ ಸದಾ ಶಿಸ್ತು ಮತ್ತು ಶಾಂತಿಯನ್ನು ಬಯಸುವ ಸಮುದಾಯ ವಾಗಿದ್ದು ಯಾವುದೇ ಕ್ಲಿಷ್ಟಕರ ವಿಚಾರಗಳು ಬಂದಾಗ ಅದಕ್ಕೆ ಪ್ರತಿಕ್ರಿಯೆ ನೀಡದೆ ಮೌನವಹಿಸುತ್ತಿದೆ. ಇದರ ಲಾಭವನ್ನು ಇತರರು ಪಡೆಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಕ್ರೈಸ್ತ ಸಮುದಾಯವನ್ನು ತಪ್ಪಾಗಿ ಬಿಂಬಿಸುವ ಪ್ರಯತ್ನ ಕೂಡ ನಡೆಯುತ್ತಿದ್ದು ಈ ವಿಚಾರದಲ್ಲಿ ಕ್ರೈಸ್ತ ಸಮುದಾಯ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಮಾತನಾಡಿ, ಕ್ರೈಸ್ತ ಸಮುದಾಯದ ಮೇಲೆ ಭಯದ ಕರಿ ನೆರಳು ಕಾಣುವ ಲಕ್ಷಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಸಮುದಾಯ ಈ ನಿಟ್ಟಿನಲ್ಲಿ ಜಾಗೃತರಾಗ ಬೇಕಾಗಿದೆ. ಸಮುದಾಯದಲ್ಲಿ ನಾಯಕತ್ವ ಹೊಂದಿರುವವರು ಹಲವಾರು ಮಂದಿ ಇದ್ದರೂ ರಾಜಕೀಯ ನಾಯಕತ್ವ ಕಡಿಮೆಯಾಗಿದ್ದು ಈ ನಿಟ್ಟಿನಲ್ಲಿ ಕ್ರೈಸ್ತ ಸಮುದಾಯದ ನಾಯಕರು ಹೆಚ್ಚು ಗಮನ ಹರಿಸಬೇಕಾಗಿದೆಂದು ತಿಳಿಸಿದರು.

ವಿಚಾರಗೋಷ್ಠಿಯ ಮೇಲೆ ನಡೆದ ಚರ್ಚೆಯಡಿ ಸರಕಾರ ಹಾಗೂ ಧರ್ಮ ಪ್ರಾಂತ್ಯದ ಹಂತದಲ್ಲಿ ಮಾಡಲಾದ 9 ನಿರ್ಣಯಗಳನ್ನು ಸಮಿತಿಯ ಮುಖ್ಯಸ್ಥ ವಾಲ್ಟರ್ ಸಿರಿಲ್ ಪಿಂಟೊ ಮಂಡಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಕ್ರೈಸ್ತ ನಾಯಕರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ವಹಿಸಿದ್ದರು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಎಐಸಿಸಿ ಸದಸ್ಯೆ ಜೆನೆಟ್ ಡಿಸೋ, ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷ ಜೋಯ್ಲಸ್ ಡಿಸೋ, ಮುಂಬೈ ಮೊಡೆಲ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಆಲ್ಬರ್ಟ್ ಡಿಸೋಜ, ಮಂಗಳೂರು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಎಐಸಿಯು ಅಧ್ಯಕ್ಷ ಲ್ಯಾನ್ಸಿ ಡಿಕುನ್ಹಾ, ಮುಂಬೈ ಕೆಥೊಲಿಕ್ ಸಭಾ ಅಧ್ಯಕ್ಷ ರಫಾಯೆಲ್ ಡಿಸೋಜ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಆಧ್ಯಾತ್ಮಿಕ ನಿರ್ದೇಶಕ ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ನಿಯೋಜಿತ ಅಧ್ಯಕ್ಷ ರೋಬರ್ಟ್ ಮಿನೇಜಸ್, ಮಾಜಿ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ.ಲೆಸ್ಲಿ ಡಿಸೋಜ, ಪಾಲನಾ ಸಮಿತಿಯ ಉಪಾಧ್ಯಕ್ಷ ಬ್ಯಾಪ್ಟಿಸ್ಟ್ ಡಾಯಸ್, ಮಾಜಿ ಜಿಪಂ ಅಧ್ಯಕ್ಷರುಗಳಾದ ಜೆರಾಲ್ಡ್ ಫೆರ್ನಾಂಡಿಸ್, ಗ್ಲ್ಯಾಡಿಸ್ ಆಲ್ಮೇಡಾ, ಎಐಸಿಯು ರಾಜ್ಯಾಧ್ಯಕ್ಷ ಆಸ್ಸಿಸಿ ಗೊನ್ಸಾಲ್ವಿಸ್, ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್, ವಲಯ ಅಧ್ಯಕ್ಷ ರೊನಾಲ್ಡ್, ಹೆರಿಕ್, ಸಮುದಾಯೋತ್ಸವ ಕಾರ್ಯದರ್ಶಿ ಮೇರಿ ಡಿಸೋಜಾ, ಕೆಥೊಲಿಕ್ ಸ್ತ್ರೀ ಸಂಘಟನೆ ಉಡುಪಿ ಧರ್ಮಪ್ರಾಂತ್ಯ ಅಧ್ಯಕ್ಷೆ ಪ್ರಮೀಳಾ ಡೆಸಾ ಉಪಸ್ಥಿತರಿದ್ದರು.

ಸಮುದಾಯೋತ್ಸವ ಸಂಚಾಲಕ ಎಲ ರೋಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಕಾರ್ಯದರ್ಶಿ ಸಂತೋಷ್ ಕರ್ನೆಲಿಯೊ ವಂದಿಸಿದರು. ಎಡ್ವರ್ಡ್ ಲಾರ್ಸನ್ ಡಿಸೋಜಾ, ಸುಜಾ ಡಿಸೋಜಾ ಮತ್ತು ಜೆನೆವಿವ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News