×
Ad

ಸಿಎಎ ಬಗ್ಗೆ ಅಮಿತ್ ಶಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ: ಗುಂಡುರಾವ್

Update: 2020-01-19 22:19 IST

ಉಡುಪಿ, ಜ.19: ಸಿಎಎ ವಿರೋಧಿಸುವವರು ದಲಿತ ವಿರೋಧಿಗಳು ಎಂಬ ಹೇಳಿಕೆ ನೀಡುವ ಮೂಲಕ ಗೃಹ ಸಚಿವ ಅಮಿತ್ ಶಾ ಉದ್ದೇಶಪೂರ್ವಕ ವಾಗಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇಲ್ಲಿ ಯಾರು ಕೂಡ ದಲಿತರು, ಹಿಂದುಗಳು, ಕ್ರಿಶ್ಚಿಯನ್ನರಿಗೆ ಪೌರತ್ವ ಕೊಡಬೇಡಿ ಎಂಬುದಾಗಿ ಹೇಳುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠಕ್ಕೆ ರವಿವಾರ ಭೇಟಿ ನೀಡಿದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತ, ಇಂದಿರಾ ಗಾಂಧಿ, ಉಗಾಂಡ, ಶ್ರೀಲಂಕಾದಿಂದ ಬಂದ ಎಲ್ಲ ಧರ್ಮದ ಭಾರತೀಯ ವಲಸಿಗರಿಗೂ ಪೌರತ್ವ ನೀಡಿದ್ದಾರೆ. ನಾವು ಪೌರತ್ವ ಕೊಡುವುದಕ್ಕೆ ವಿರೋಧ ಮಾಡುತ್ತಿಲ್ಲ. ಒಂದು ಧರ್ಮವನ್ನು ಗುರಿಯಾಗಿರಿಸಿ ಕೊಂಡು, ಧರ್ಮದ ಆಧಾರದ ಮೇಲೆ ವಿಭಜನೆ ಮಾಡುವಂತಹ ಕಾನೂನು ಮಾಡಿರುವುದು ಸರಿಯಲ್ಲ. ಹಾಗಾಗಿ ಈ ಕಾನೂನು ಸಂವಿಧಾನ ಬಾಹಿರ ಎಂದರು.

ಎನ್‌ಆರ್‌ಸಿ ವಿಚಾರದಲ್ಲಿ ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ. ಇಂದು ಈ ಕಾನೂನು ವಿರುದ್ಧ ಜನ ಸ್ವಯಂ ಪ್ರೇರಣೆಯಿಂದ ಹೋರಾಟ ಮಾಡು ತ್ತಿದ್ದಾರೆ. ಇದನ್ನು ಸರಕಾರ ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು. ಅದು ಬಿಟ್ಟು ನಾವು ಮಾಡಿದ್ದೆ ಸರಿ, ನಾವು ಹೇಳಿದ್ದನ್ನು ಒಪ್ಪಿಕೊಳ್ಳಲೇ ಬೇಕು ಎಂಬ ನೀತಿ ಒಳೆ್ಳಯದಲ್ಲ ಎಂದು ಅವರು ಹೇಳಿದರು.

ಇದರ ಬಗ್ಗೆ ಕೇಂದ್ರ ಸರಕಾರ ಮರುಚಿಂತನೆ ಮಾಡಬೇಕು. ಪಂಜಾಬ್ ಸೇರಿದಂತೆ ಹಲವು ರಾಜ್ಯಗಳು ಇದಕ್ಕಾಗಿ ಒತ್ತಾಯ ಮಾಡುತ್ತಿದೆ. ಈ ಸಂಬಂಧ ಇನ್ನೊಂದು ಬಾರಿ ಚರ್ಚೆಗೆ ನಾವು ಸಿದ್ಧರಿದ್ದೇವೆ. ಇದು ಆ ಕಾನೂನು ವಿರುದ್ಧ ಹೋರಾಟವೇ ಹೊರತು ಬಿಜೆಪಿ ವಿರುದ್ಧ ಅಲ್ಲ. ದೇಶದಲ್ಲಿ ಜನರನ್ನು ವಿರೋಧ ಕಟ್ಟಿಕೊಂಡು, ಹಿಂಸಾಚಾರಗಳು ನಡೆಯಲು ಹಾಗೂ ದೇಶವನ್ನು ಒಡೆಯಬೇಕೆಂಬ ಇಚ್ಛೆ ಬಿಜೆಪಿಗೆ ಇದ್ದರೆ ಮಾಡಲಿ ಎಂದು ಅವರು ತಿಳಿಸಿದರು.

ಸಿಎಎ ಅನುಷ್ಠಾನವನ್ನು ರಾಜ್ಯ ನಿರಾಕರಿಸುವುದು ಅಸಂವಿಧಾನಿಕ ಎಂಬ ಕಬಿಲ್ ಸಿಬಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರದ ಕಾನೂನು ರಾಜ್ಯಗಳು ಉಲ್ಲಂಘನೆ ಮಾಡಿದರೆ ಏನು ಆಗಬಹುದು ಎಂಬುದನ್ನು ಮುಂದೆ ನೋಡಬೇಕಾ ಗುತ್ತದೆ. ಈಗಾಗಲೇ ದೇಶದ ಅನೇಕ ರಾಜ್ಯಗಳು ಈ ಕಾನೂನನ್ನು ತಿರಸ್ಕಾರ ಮಾಡಲು ತೀರ್ಮಾನ ಮಾಡಿವೆ. ಸುಪ್ರೀಂ ಕೋರ್ಟ್ ಕೂಡ ಇದರ ಬಗ್ಗೆ ಒಳ್ಳೆಯ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ಶೀಘ್ರವೇ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಅಗತ್ಯ

ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಎಐಸಿಸಿ ಹೆಚ್ಚು ತಡ ಮಾಡದೆ, ಎಲ್ಲರ ವಿಶ್ವಾಸ ಪಡೆದು, ಸಮಾಲೋಚನೆ ನಡೆಸಿ ಒಮ್ಮತದ ಅಭಿಪ್ರಾಯದಂತೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ರಾಜ್ಯ ದಲ್ಲಿ ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಸಂಘಟನೆ ಮತ್ತು ಹೋರಾಟವನ್ನು ಮಾಡಬೇಕಾಗಿದೆ. ಆದುದರಿಂದ ಎಐಸಿಸಿ ಕೂಡಲೇ ಆ ತೀರ್ಮಾನಕ್ಕೆ ಕಾರ್ಯ ಪ್ರವೃತರಾಗಬೇಕು ಎಂದು ದಿನೇಶ್ ಗುಂಡುರಾವ್ ಹೇಳಿದರು.

ಕೇರಳದಿಂದ ರಾಹುಲ್ ಗಾಂಧಿ ಆಯ್ಕೆ ದೊಡ್ಡ ದುರಂತ ಎಂಬ ರಾಮಚಂದ್ರ ಗುಹಾ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದಲ್ಲಿ ಅಭಿಪ್ರಾಯ ಹೇಳಲು ಎಲ್ಲರಿಗೂ ಅವಕಾಶ ಇದೆ. ಇಂದಿರಾ ಗಾಂಧಿ ಕುಟುಂಬ ಈ ದೇಶಕ್ಕೆ ಬಹಳ ದೊಡ್ಡ ಸೇವೆ ನೀಡಿದೆ. ರಾಹುಲ್ ಗಾಂಧಿ ಎಲ್ಲ ರೀತಿಯ ಹೋರಾಟಕ್ಕೆ ಬದ್ಧರಾಗಿರುವ ನಾಯಕ. ಕಾಂಗ್ರೆಸ್ ಪಕ್ಷಕ್ಕೆ ರಾಹುಲ್ ಗಾಂಧಿ ನಾಯಕತ್ವ ಬಹಳ ಅಗತ್ಯವಿದೆ. ಅವರು ಪಕ್ಷವನ್ನು ಮು್ನಡೆಸುವ ವಿಶ್ವಾಸ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News