ಸಿಎಎ ಕುರಿತು ಗೊಂದಲ ನಿವಾರಣೆಗೆ ಸಿದ್ಧ: ಸದಾನಂದ ಗೌಡ

Update: 2020-01-19 16:51 GMT

ಉಡುಪಿ, ಜ.19: ಸಿಎಎ, ಎನ್‌ಆರ್‌ಸಿ ಕಾಯಿದೆ ಕುರಿತು ಆಳವಾದ ಅಧ್ಯಯನ ಮಾಡದಿದ್ದರೆ ಗೊಂದಲಕ್ಕೆ ಕಾರಣವಾಗುತ್ತದೆ. ಈ ವಿಚಾರದಲ್ಲಿ ಜನರ ಗೊಂದಲ ನಿವಾರಣೆಗೆ ನಾವು ಸಿದ್ಧರಿದ್ದೇವೆ. ಈ ಕಾಯಿದೆಯಿಂದ ದೇಶದ 130 ಕೋಟಿ ಜನರಿಗೆ ಯಾವುದೇ ತೊಂದರೆ ಆಗಲ್ಲ ಎಂದು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠಕ್ಕೆ ರವಿವಾರ ಭೇಟಿ ನೀಡಿದ ಸಂದರ್ಭ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ರಾಜ್ಯಸಭೆಯಲ್ಲಿ ಸಂಖ್ಯಾಬಲ ಇಲ್ಲದಿದ್ದರೂ ಸಿಎಎ ಕಾಯ್ದೆ ಪಾಸ್ ಆಗಿದೆ. ರಾಜ್ಯಸಭೆ, ಲೋಕಸಭೆಯಲ್ಲಿ ಸಿಎಎಗೆ ಬೆಂಬಲ ಸಿಕ್ಕಿದೆ. ಕಾಂಗ್ರೆಸ್ ಪಕ್ಷಕ್ಕೆ ಕಳೆದ ಐದೂವರೆ ವರ್ಷಗಳಲ್ಲಿ ವಿರೋಧಿಸಲು ಏನೂ ಸಿಕ್ಕಿಲ್ಲ. ಅದಕ್ಕಾಗಿ ಈ ವಿಚಾರ ಇಟ್ಟುಕೊಂಡು ಜನರ ನಡುವೆ ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದರು.

ಸಚಿವ ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿ ಒಬ್ಬರಿಗೆ ಇರುವ ವಿಶೇಷ ಅಧಿಕಾರ ಆಗಿದೆ. ಅವರು ಈ ಬಗ್ಗೆ ಹೈಕಮಾಂಡ್ ಜೊತೆ ಸಮಾಲೋಚನೆ ಮಾಡಿದ್ದಾರೆ. ಸದ್ಯ ಮುಖ್ಯಮಂತ್ರಿ ಪ್ರಧಾನಿಗಳ ಜೊತೆ ವಿದೇಶ ಪ್ರವಾಸದಲ್ಲಿದ್ದಾರೆ. ಎಲ್ಲವೂ ಸುಗಮವಾಗಿ ನಡೆಯುತ್ತದೆ. ಕೊಟ್ಟ ಭರವಸೆಗಳನ್ನು ಮುಖ್ಯಮಂತ್ರಿ ಈಡೇರಿಸುತ್ತಾರೆ ಎಂದು ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್ ಏಳು ತಂಡಗಳಾಗಿ ಒಡೆದುಹೋಗಿವೆ. ಗುಂಡು ರಾವ್, ಸಿದ್ದರಾಮಯ್ಯ, ಖರ್ಗೆ, ಖಂಡ್ರೆ, ಡಿಕೆಶಿ, ಪರಮೇಶ್ವರ್ ದೆಹಲಿ ಪ್ರವಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ ದೇಶದ ರಿಜೆಕ್ಟೆಡ್ ಗೂಡ್ಸ್ ಆಗಿದ್ದು, ವಿಪಕ್ಷ ಸ್ಥಾನಮಾನ ಪಡೆಯುವ ತಾಕತ್ ಇಲ್ಲದ ಪಕ್ಷವಾಗಿದೆ ಎಂದು ಅವರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News