ಧಾರ್ಮಿಕ ಸಂಸ್ಥೆಗಳ ಅಕ್ರಮ ಕಟ್ಟಡಗಳ ತೆರವು ಪ್ರಕ್ರಿಯೆಗೆ ಸಿದ್ಧತೆ

Update: 2020-01-19 17:14 GMT

ಮಂಗಳೂರು, ಜ.19: ಸಾರ್ವಜನಿಕ ಸ್ಥಳಗಳು ಮತ್ತು ಉದ್ಯಾನವನವನ್ನು ಅತಿಕ್ರಮಿಸಿಕೊಂಡು ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿ 10 ವರ್ಷವಾದರೂ ಕೂಡ ತೆರವು ಪ್ರಕ್ರಿಯೆಗೆ ವೇಗ ಸಿಕ್ಕಿರಲಿಲ್ಲ. ಆರಂಭದಲ್ಲಿ ಈ ಬಗ್ಗೆ ಉತ್ಸಾಹ ತೋರಿದ್ದ ಅಧಿಕಾರಿಗಳು ಬಳಿಕ ನಿರ್ಲಕ್ಷ ತಾಳಿದ್ದರು. ಇದೀಗ ರಾಜ್ಯ ಸರಕಾರವು ಈ ಬಗ್ಗೆ ವೇಳಾಪಟ್ಟಿಯೊಂದಿಗೆ ತೆರವಿಗೆ ಗಡುವು ನೀಡಿದೆ. ಅದರಂತೆ ದ.ಕ.ಜಿಲ್ಲಾಡಳಿತ ಕೂಡ ಧಾರ್ಮಿಕ ಸಂಸ್ಥೆಗಳ ಅಕ್ರಮ ಕಟ್ಟಡಗಳ ತೆರವು ಪ್ರಕ್ರಿಯೆಗೆ ಸಿದ್ಧತೆಯಲ್ಲಿ ತೊಡಗಿದೆ.

ಸರ್ವೋಚ್ಛ ನ್ಯಾಯಾಲಯವು ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ 2009ರ ಸೆ.29ರಂದು ಆದೇಶ ನೀಡಿತ್ತು. ಅದರಂತೆ ರಾಜ್ಯ ಸರಕಾರ ಸಮಗ್ರ ಕಾರ್ಯವಿಧಾನ ರೂಪಿಸಿ 2010ರ ಫೆ.17ರಂದು ವಿವರವಾದ ಮಾರ್ಗಸೂಚಿಯನ್ನೂ ಹೊರಡಿಸಿತ್ತು. ಸರಕಾರವು ಪ್ರತಿ ಜಿಲ್ಲೆಯಲ್ಲೂ ಕೆಳ ಹಂತದಿಂದ ಪಡೆದುಕೊಂಡ ವಿವರಗಳನ್ನು ಮೂರು ತಿಂಗಳಿಗೊಮ್ಮೆ ಪರಿಶೀಲಿಸಲು ಜಿಲ್ಲಾಮಟ್ಟದ ಸಮಿತಿಯ್ನೂ ರೂಪಿಸಿತ್ತು. ಆದರೆ ಪ್ರಯೋಜನವಾಗಿರಲಿಲ್ಲ.

ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿರುವ ಈ ಸಮಿತಿಯಲ್ಲಿ ಪಾಲಿಕೆಗಳ ಆಯುಕ್ತರು, ಜಿಪಂ ಸಿಇಒ, ನಗರ, ತಾಲೂಕು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಎಸ್ಪಿ, ಪಿಡಬ್ಲ್ಯುಡಿ/ಜಿಪಂ ಎಕ್ಸಿಕ್ಯುಟಿವ್ ಇಂಜಿನಿಯರ್, ನಗರ ಪ್ರಾಧಿಕಾರಗಳ ಆಯುಕ್ತರು, ಅಪರ ಜಿಲ್ಲಾಧಿಕಾರಿಗಳಿದ್ದಾರೆ.

ಹಂತ ಹಂತವಾಗಿ ನಡೆಯುವ ಪ್ರಕ್ರಿಯೆಗೆ ವೇಗ ನೀಡಲು ರಾಜ್ಯ ಒಳಾಡಳಿತ ಇಲಾಖೆಯು ಈ ಸಮಿತಿಗೆ ನಿದೇಶನ ನೀಡಿದೆ. ಅಲ್ಲದೆ ಜಿಲ್ಲಾಡಳಿಕ್ಕೆ ವೇಳಾಪಟ್ಟಿಯನ್ನೂ ನೀಡಿದೆ. ಅಲ್ಲದೆ ಸೂಕ್ತ ಕ್ರಮ ಕೈಗೊಂಡು ಸರಕಾರಕ್ಕೆ ವರದಿ ಸಲ್ಲಿಸಲು ಕೂಡ ಸೂಚನೆ ನೀಡಿದೆ.

ಜ.1ರಿಂದ 31ರೊಳಗೆ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು ಧಾರ್ಮಿಕ ಸಂಸ್ಥೆಗಳ ಅಕ್ರಮ ಕಟ್ಟಡಗಳ ಬಗ್ಗೆ ಸರ್ವೇ ನಡೆಸಬೇಕು. ಫೆ.1ರಿಂದ 28ರೊಳಗೆ ತಹಶೀಲ್ದಾರ್/ಮಹಾನಗರ ಪಾಲಿಕೆ ಆಯುಕ್ತರು ಮಾಹಿತಿಯನ್ನು ಸಂಗ್ರಹಿಸಿ ಕ್ರೋಢೀಕರಿಸಬೇಕು. ಮಾ.15ರೊಳಗೆ ಆಯಾ ಜಿಲ್ಲಾಧಿಕಾರಿ ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಬೇಕು. ಮಾ.25ರೊಳಗೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಪರಿಶೀಲಿಸಿ ಕ್ರೋಢೀಕರಿಸಬೇಕು.

1579 ಧಾರ್ಮಿಕ ಸಂಸ್ಥೆಗಳ ಅಕ್ರಮ ಕಟ್ಟಡ

ದ.ಕ.ಜಿಲ್ಲೆಯಲ್ಲಿ 2009ರಲ್ಲಿ 1579 ಧಾರ್ಮಿಕ ಸಂಸ್ಥೆಗಳ ಅಕ್ರಮ ಕಟ್ಟಡಗಳನ್ನು ಗುರುತಿಸಲಾಗಿದ್ದು, ಈ ಪೈಕಿ 511 ಕಟ್ಟಡಗಳನ್ನು ಸಮಸ್ಯೆಯನ್ನು ಇತ್ಯರ್ಥ ಮಾಡಲಾಗಿದೆ. 1,068 ಧಾರ್ಮಿಕ ಕಟ್ಟಡಗಳ ತೆರವು/ಇತ್ಯರ್ಥ ಬಾಕಿ ಇದೆ. ಈ ಹಿಂದೆಯೇ ಸರಕಾರಿ, ಖಾಸಗಿ ಜಾಗದ ಎಲ್ಲ ಧಾರ್ಮಿಕ ಕೇಂದ್ರಗಳ ಪಟ್ಟಿ ಮಾಡಲಾಗಿತ್ತು. ಧಾರ್ಮಿಕ ಕೇಂದ್ರಗಳು ಸಾರ್ವಜನಿಕ ಸ್ಥಳದಲ್ಲಿದ್ದು, ಜನರ ವಾಹನ ಓಡಾಟಕ್ಕೆ ತೊಂದರೆ ಆಗಬಾರದು. ಅಂತಹವುಗಳನ್ನು ಪಟ್ಟಿ ಮಾಡಿ ಸರಕಾರಕ್ಕೆ ವರದಿ ಮಾಡಲಾಗುತ್ತಿದೆ. ಜನರಿಗೆ ಕಿರಿಕಿರಿ ಮಾಡದ, ಪಟ್ಟಾ ಜಾಗದಲ್ಲಿರುವ, ರೋಡ್ ಮಾರ್ಜಿನ್ ಬಿಟ್ಟಿರುವ ಪ್ರಕರಣಗಳನ್ನು ಸ್ಥಳೀಯ ವಾಗಿ ಇತ್ಯರ್ಥ ಮಾಡಲಾಗುತ್ತದೆ ಎಂದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಎಚ್ಚರಿಕೆ ವಹಿಸಲು ಸೂಚನೆ

ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು ಕಾರ್ಯವು ಸೂಕ್ಷ್ಮ ವಿಚಾರವಾಗಿದೆ. ಜನರ ಧಾರ್ಮಿಕ ನಿಷ್ಠೆ-ನಂಬಿಕೆಗೆ ಭಂಗವಾಗದಂತೆ ತೀವ್ರ ಎಚ್ಚರಿಕೆ ವಹಿಸಿಕೊಳ್ಳಲು ಈಗಾಗಲೆ ಜಿಲ್ಲಾಡಳಿತಕ್ಕೆ ಒಳಾಡಳಿತ ಇಲಾಖೆಯು ಸ್ಪಷ್ಟ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News