​ಪಾವೂರು-ಮಲ್ಲೂರು ಗ್ರಾಮಸಭೆಯಲ್ಲಿ ಎನ್‌ಆರ್‌ಸಿ ವಿರುದ್ಧ ನಿರ್ಣಯಕ್ಕೆ ಆಗ್ರಹ

Update: 2020-01-19 18:11 GMT

ಮಂಗಳೂರು, ಜ.19: ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತಿಭಟನೆಯೂ ನಡೆಯುತ್ತಿವೆ. ಹಲವು ಮಂದಿ ಪ್ರಾಣವನ್ನೂ ಕಳಕೊಂಡಿದ್ದಾರೆ. ಇದರಿಂದ ನಾಡಿನಲ್ಲಿ ಶಾಂತಿ ನೆಲೆಸುವ ಬದಲು ಅಶಾಂತಿ ಕದಡಲಿದೆ. ಹಾಗಾಗಿ ಈ ಕರಾಳ ಕಾಯ್ದೆಯ ವಿರುದ್ಧ ನಿರ್ಣಯ ಕೈಗೊಳ್ಳಬೇಕು ಎಂಬ ಆಗ್ರಹವು ಮಂಗಳೂರು ತಾಲೂಕಿನ ಎರಡು ಗ್ರಾಮಸಭೆಗಳಲ್ಲಿ ಆಗ್ರಹ ಕೇಳಿ ಬಂದಿವೆ.

ಶುಕ್ರವಾರ ನಡೆದ ಮಲ್ಲೂರು ಗ್ರಾಮಸಭೆಯಲ್ಲಿ ಸ್ಥಳೀಯ ದಲಿತ ನಾಯಕ ಅಣ್ಣಯ್ಯ ಎಂಬವರು ಮಾತನಾಡಿ ಯಾವ ಕಾರಣಕ್ಕೂ ಎನ್‌ಆರ್‌ಸಿಗೆ ಬೆಂಬಲ ನೀಡಬಾರದು. ಇದಕ್ಕೆ ನಮ್ಮ ವಿರೋಧವಿದೆ. ಇದರ ಅನುಷ್ಠಾನದ ವಿರುದ್ಧ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಅಗ್ರಹಕ್ಕೆ ಸಂಬಂಧಿಸಿ ‘ವಾರ್ತಾಬಾರತಿ’ಯ ಜೊತೆ ಮಾತನಾಡಿದ ಗ್ರಾಪಂ ಅಧ್ಯಕ್ಷ ಯೂಸುಫ್ ಮಲ್ಲೂರು ‘ಮೊನ್ನೆಯ ಸಭೆಯಲ್ಲಿ ಎನ್‌ಆರ್‌ಸಿ ವಿರುದ್ಧ ನಿರ್ಣಯ ಕೈಗೊಳ್ಳಬೇಕು ಎಂಬ ಬೇಡಿಕೆ ಇತ್ತು. ಈ ಬಗ್ಗೆ ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತೀರ್ಮಾನಿಸಿಲ್ಲ. ಇತರರ ಜೊತೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.

ಶನಿವಾರ ನಡೆದ ಪಾವೂರು ಗ್ರಾಮಸಭೆಯಲ್ಲಿ ಎಸ್‌ಡಿಪಿಐ ಮುಖಂಡ ಹಾರಿಸ್ ಮಲಾರ್ ಮಾತನಾಡಿ ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಎನ್‌ಆರ್‌ಸಿ, ಸಿಎಎ, ಎನ್‌ಪಿಅರ್ ಸಂವಿಧಾನ ವಿರೋಧಿಯಾಗಿದೆ. ಇದರ ವಿರುದ್ಧ ಎಲ್ಲೆಡೆ ಹೋರಾಟ ನಡೆಯುತ್ತಿದೆ. ಹಾಗಾಗಿ ಇಂದಿನ ಈ ಗ್ರಾಮಸಭೆಯಲ್ಲಿ ಇದರ ವಿರುದ್ಧ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಗ್ರಾಪಂ ಅಧ್ಯಕ್ಷ ಫಿರೋಝ್ ಮಲಾರ್ ‘ಈವರೆಗೂ ಈ ಬಗ್ಗೆ ಗ್ರಾಪಂಗೆ ಅಧಿಕೃತ ಸುತ್ತೋಲೆ ಬಂದಿಲ್ಲ. ಸುತ್ತೋಲೆ ಬಂದ ಬಳಿಕ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಆದರೆ, ವೈಯಕ್ತಿಕವಾಗಿ ನಾನು ಈ ಕರಾಳ ಕಾಯ್ದೆಗೆ ವಿರುದ್ಧವಾಗಿದ್ದೇನೆ. ನಾವು ಯಾವುದೇ ದಾಖಲೆಪತ್ರಗಳನ್ನೂ ಕೂಡ ಸರಕಾರಕ್ಕೆ ಸಲ್ಲಿಸುವುದಿಲ್ಲ’ ಎಂದು ಹೇಳಿದರು.

ಒಟ್ಟಿನಲ್ಲಿ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತಿಭಟನಾ ಕಾರ್ಯಕ್ರಮಗಳಲ್ಲದೆ ಮದುವೆ ಮತ್ತಿತರ ಸಮಾರಂಭಗಳಲ್ಲೂ ಪ್ರತಿರೋಧ-ಮಾಹಿತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದೀಗ ಗ್ರಾಮಸಭೆಗಳಲ್ಲೂ ಪ್ರತಿರೋಧ ಕೇಳಿ ಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News