ಮಂಗಳೂರಿನಲ್ಲಿ 'ಸ್ಫೋಟಕ' ಪತ್ತೆ ಪ್ರಕರಣದ ತನಿಖೆಗೆ 3 ತಂಡಗಳ ರಚನೆ: ಕಮಿಷನರ್ ಹರ್ಷ

Update: 2020-01-20 12:59 GMT

ಮಂಗಳೂರು, ಜ.20: ಇಂದು ಬೆಳಗ್ಗೆ ವ್ಯಕ್ತಿಯೊಬ್ಬ ಅನುಮಾನಾಸ್ಪದ ಬ್ಯಾಗೇಜ್ ಒಂದನ್ನು ತಂದಿದ್ದು, ಅದರೊಳಗೆ ಸಂಭಾವ್ಯ ಸ್ಪೋಟಕ ವಸ್ತು ಇತ್ತು. ವಿಮಾನ ನಿಲ್ದಾಣದ ಸುರಕ್ಷತೆ ಜವಾಬ್ದಾರಿ ಹೊತ್ತ ಸಿಐಎಸ್ ಎಫ್ ಸಿಬ್ಬಂದಿ ಅದನ್ನು ಗುರುತಿಸಿ ಅದನ್ನು ನಿಯಮ ಪ್ರಕಾರ ಶೋಧನೆಗೆ ಒಳಪಡಿಸಿದ್ದಾರೆ ಎಂದು ಮಂಗಳೂರು ಕಮಿಷನರ್ ಹರ್ಷ ತಿಳಿಸಿದ್ದಾರೆ.

ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 'ಸ್ಫೋಟಕ' ವಸ್ತು ಪತ್ತೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಅವರು ಶಂಕಿತ ಮಧ್ಯವಯಸ್ಕ ವ್ಯಕ್ತಿಯೊಬ್ಬ ಈ ಬ್ಯಾಗ್ ತಂದಿರಿಸಿದ್ದಾನೆ. ಅದರೊಳಗೆ ಸಂಭಾವ್ಯ ಸ್ಪೋಟಕ ವಸ್ತು ಇತ್ತು. ಸಿಐಎಸ್ ಎಫ್ ಸಿಬ್ಬಂದಿಗೆ ಬ್ಯಾಗೇಜ್ ಬಗ್ಗೆ ಸಂದೇಹ ಬಂದ ಬಳಿಕ ಅವರು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪ್ರಯಾಣಿಕರ ಸುರಕ್ಷತೆಗಾಗಿ ಸಂಬಂಧಿತ ಪ್ರದೇಶಕ್ಕೆ ಪ್ರವೇಶ ನಿರ್ಬಂಧಿಸಿ ಬಾಂಬ್ ಪತ್ತೆ ದಳವನ್ನು ಕರೆಸಲಾಯಿತು. ಸಿ ಐಎಸ್ ಎಫ್ ದೂರಿನ ಪ್ರಕಾರ ಬಜ್ಪೆ ಪೊಲೀಸ್ ಠಾಣೆಯಲ್ಲಿ ಸ್ಪೋಟಕ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ಪ್ರಾಥಮಿಕ ಮಾಹಿತಿ ಕಲೆ ಹಾಕಲಾಗಿದೆ. ಮಧ್ಯವಯಸ್ಕ ವ್ಯಕ್ತಿಯೊಬ್ಬ ಇದರಲ್ಲಿ ಭಾಗಿಯಾಗಿರುವ ಶಂಕೆಯಿದೆ. ಫಾರ್ಮಲ್ ಬಟ್ಟೆ ಧರಿಸಿ, ಕ್ಯಾಪ್ ಹಾಕಿಕೊಂಡಿದ್ದ ವ್ಯಕ್ತಿ ಆಟೋ ಒಂದರಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ. ಈ ಪ್ರಕರಣದ ಬಗ್ಗೆ ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿದೆ. ಈ ಸಂದರ್ಭದಲ್ಲಿ ಇದಕ್ಕಿಂತ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಜನರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದವರು ಹೇಳಿದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News