ದೇರಳಕಟ್ಟೆ ಕುರ್ಚಿಗಳಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಗಳ ಬಂಧನ- ಪರಿಹಾರಕ್ಕೆ ಒತ್ತಾಯ

Update: 2020-01-20 14:08 GMT

ಮಂಗಳೂರು, ಜ.20: ದೇರಳಕಟ್ಟೆಯಲ್ಲಿ ಇತ್ತೀಚೆಗೆ ನಡೆದ ಸಮಾವೇಶದಲ್ಲಿ ಕುರ್ಚಿಗಳಿದ್ದ ವಾಹನಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಕೊಟ್ಟ ಪರಿಣಾಮ ಶಾಮಿಯಾನದ ಮಾಲಿಕ ಖಾದರ್ ಅವರಿಗೆ 20 ಲಕ್ಷ ರೂ. ನಷ್ಟ ಉಂಟಾಗಿದೆ. ಘಟನೆಗೆ ಕಾರಣರಾದ ಆರೋಪಿಗಳನ್ನು ಪೊಲೀಸ್ ಇಲಾಖೆಯು ತತ್‌ಕ್ಷಣವೇ ಬಂಧಿಸಿ, ನಷ್ಟ ಸಂಭವಿಸಿದವರಿಗೆ ಶೀಘ್ರವೇ ಸರಕಾರ ಸೂಕ್ತ ಪರಿಹಾರ ವನ್ನು ನೀಡಬೇಕು ಎಂದು ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘ ಆಗ್ರಹಿಸಿದೆ.

ಸೋಮವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಾಬು ಕೆ.ವಿ ಅವರು, ಜಿಲ್ಲೆಯ ಎಲ್ಲಾ ಭಾಗದಲ್ಲಿ ನಡೆಯುವ ಪ್ರತೀಯೊಂದು ಕಾರ್ಯಕ್ರಮಕ್ಕೆ ಬೇಕಾಗುವ ಶಾಮಿಯಾನ ಸಂಬಂಧಿತ ವ್ಯವಸ್ಥೆಯನ್ನು ನಾವು ನಡೆಸಿಕೊಂಡು ಬಂದಿದ್ದೇವೆ. ದೊಡ್ಡ ಸಮಾರಂಭಗಳು ನಡೆಯುವಾಗ ಸಾಮಗ್ರಿಗಳು ಕಡಿಮೆಯಾದಲ್ಲಿ ಮತ್ತೊಬ್ಬರ ಸಾಮಗ್ರಿಗಳನ್ನು ತಂದು ನಾವು ನಮ್ಮ ಜವಾಬ್ದಾರಿ ನಿಭಾಯಿಸಿದ್ದೇವೆ. ಆದರೆ, ಜ.12ರಂದು ದೇರಳಕಟ್ಟೆಯಲ್ಲಿ ನಡೆದ ಸಮಾರಂಭಕ್ಕೆ ಖಾದರ್ ಅವರು ಬೇರೆ ಶಾಮಿಯಾನದ ಮಾಲಕರ ಸಾಮಗ್ರಿಗಳನ್ನು ತಂದಿದ್ದರು. ಸಮಾರಂಭ ಮುಗಿದ ಬಳಿಕ 2000 ಕುರ್ಚಿಗಳನ್ನು ತಮ್ಮ ವಾಹನದಲ್ಲಿ ತುಂಬಿಸಿ ಇಟ್ಟಿದ್ದರು. ಉಳಿದ 1350 ಕುರ್ಚಿಗಳನ್ನು ವಾಹನದ ಬಳಿ ಪೇರಿಸಿ ಇಟ್ಟಿದ್ದರು. ಆದರೆ ರಾತ್ರಿ ಸುಮಾರು 2 ಗಂಟೆಗೆ ಯಾರೋ ಕಿಡಿಗೇಡಿಗಳು ವಾಹನಕ್ಕೆ ಬೆಂಕಿ ಕೊಟ್ಟು ಕುರ್ಚಿಗಳು ಬೆಂಕಿಗೆ ಆಹುತಿಯಾಗಿದೆ ಎಂದರು.

ಶ್ರಮಜೀವಿಗಳಾದ ನಾವು ಸಮಾಜದ ಎಲ್ಲಾ ಸ್ತರದ ವ್ಯಕ್ತಿಗಳಿಗೆ ಸೇವೆ ನೀಡುತ್ತಾ ಬಂದಿರುವಾಗ ಇಂತಹ ಘಟನೆಗಳು ನಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸಿದೆ. ಮುಂದಿನ ದಿನದಲ್ಲಿ ಯಾವ ರೀತಿಯಲ್ಲಿ ಸೇವೆ ಸಲ್ಲಿಸುವುದು ಎಂಬ ಚಿಂತೆ ನಮಗೆ ಎದುರಾಗಿದೆ ಎಂದರು.

ಪತ್ರಿಕಾಗೊಷ್ಠಿಯಲ್ಲಿ ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಪ್ರಮುಖರಾದ ಶಿವಪ್ರಸಾದ್ ಹೆಗ್ಡೆ, ಉಮಾನಾಥ ಸುವರ್ಣ, ಸುಭಾಶ್ಚಂದ್ರ ಜೈನ್, ಕ್ಲೇವರ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News