ರಕ್ತದಲ್ಲಿ ನೆಲದ ಗುಣ ಇರುವ ಮುಸ್ಲಿಮರು, ದಲಿತರೇ ದೇಶದ ಮೂಲ ನಿವಾಸಿಗಳು: ಭಾಸ್ಕರ ಪ್ರಸಾದ್

Update: 2020-01-20 14:28 GMT

ಕಾಪು, ಜ.20: ಈ ದೇಶದ ಮೂಲನಿವಾಸಿಗಳು ಯಾರು ಎಂಬುದನ್ನು ಪೇಪರ್ ದಾಖಲೆಗಳ ಬದಲು ವೈಜ್ಞಾನಿಕವಾಗಿ ಡಿಎನ್‌ಎ ಮೂಲಕ ಸಾಬೀತು ಪಡಿಸುವ ಕಾರ್ಯವನ್ನು ಸರಕಾರ ಮಾಡಬೇಕು. ಯಾರ ರಕ್ತದಲ್ಲಿ ಈ ನೆಲದ ಗುಣ ಇರುತ್ತದೆಯೋ ಅವರೇ ನಿಜವಾದ ಭಾರತೀಯರು. ಅಂತಹ ನೆಲದ ಗುಣ ಇಲ್ಲಿನ ಮುಸ್ಲಿಮರು, ದಲಿತರು, ಹಿಂದುಳಿದವರ್ಗದವರಲ್ಲಿ ಮಾತ್ರ ಇರಲು ಸಾಧ್ಯ ಎಂದು ದಲಿತ ಹೋರಾಟಗಾರ ಭಾಸ್ಕರ ಪ್ರಸಾದ್ ಹೇಳಿದ್ದಾರೆ.

ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕಾಯಿದೆಯ ವಿರುದ್ಧ ಉಡುಪಿ ನಾಗರಿಕ ಹಕ್ಕು ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಸೋಮವಾರ ಕಟಪಾಡಿ ಪೇಟೆಯಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಮಾವೇಶ ವನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಬಿಲ್ಲವ, ಬಂಟ, ಮೊಗವೀರ, ದಲಿತರಲ್ಲಿ ಧರ್ಮದ ವಿಷವನ್ನು ತುಂಬುವ ಕೆಲಸವನ್ನು ಆರ್‌ಎಸ್‌ಎಸ್ ಮಾಡುತ್ತಿದೆ. ಆದರೆ ಇವರ ಮಕ್ಕಳು ವಿದೇಶಗಳಲ್ಲಿ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಶೂದ್ರ ಯುವಕರು ಇವರ ರಾಜಕೀಯಕ್ಕೆ ಬಲಿಯಾಗುತ್ತಿದ್ದಾರೆ. ಈ ಯುವಕರು ಆರ್‌ಎಸ್‌ಎಸ್ ಹಾಗೂ ಸಂಘಪರಿ ವಾರದ ವಿಷವರ್ತುಲದಿಂದ ಹೊರಬರಬೇಕು. ಕೇವಲ ಶೇ.3ರಷ್ಟಿರುವ ಮಂದಿ ತುಂಬುವ ವಿಷಕ್ಕೆ ಶೇ.97ರಷ್ಟು ಮಂದಿ ಬಲಿಯಾಗುತ್ತಿದ್ದಾರೆ ಎಂದು ಅವರು ದೂರಿದರು.

ನ್ಯಾಯವಾದಿ ಸುಧೀರ್ ಕುಮಾರ್ ಮಾತನಾಡಿ, ಮೂರ್ಖರು ಜಾರಿಗೆ ತಂದಿರುವ ಪೌರತ್ವ ಕಾಯಿದೆಯಲ್ಲಿ ಕೇವಲ ಮುಸ್ಲಿಮರು ಮಾತ್ರ ತಮ್ಮ ಭಾರತೀಯತೆಯನ್ನು ಸಾಬೀತು ಪಡಿಸುವುದಲ್ಲ. ಇದರಲ್ಲಿ ಎಲ್ಲರು ಕೂಡ ದಾಖಲೆ ಕೊಡಬೇಕಾಗುತ್ತದೆ. ಕಪ್ಪು ಹಣ, ಉದ್ಯೋಗ ಕೊಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಇವರು, ಜನರನ್ನು ಮಂಗ ಮಾಡುತ್ತಿದ್ದಾರೆ. ಈ ಬಗ್ಗೆ ಹಿಂದು, ಮುಸ್ಲಿಮರು ಎಲ್ಲರು ಕೂಡ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಮಾತನಾಡಿ, ಪೌರತ್ವ ಕಾಯ್ದೆ ಎಂಬ ಕಂಟಕವನ್ನು ಕೇವಲ ಅಲ್ಪಸಂಖ್ಯಾತರು ಮಾತ್ರವಲ್ಲ, ಹಿಂದುಗಳು ಕೂಡ ಎದುರಿಸಬೇಕಾಗುತ್ತದೆ. ನಮ್ಮ ಪೌರತ್ವವನ್ನು ಸಾಬೀತುಪಡಿಸಲು ದಾಖಲೆ ಗಳಿಗಾಗಿ ಕಚೇರಿಯಿಂದ ಕಚೇರಿ ಅಲೆದಾಡಬೇಕಾಗುತ್ತದೆ. ಇಂದು ಕ್ರೈಸ್ತರ ಕಾಲ ಬುಡಕ್ಕೆ ಕೊಡಲಿ ಏಟು ಬಿದ್ದಿದೆ. ಕ್ರಿಶ್ಚಿಯನ್ನರು ಕೂಡ ಸುರಕ್ಷಿತವಲ್ಲ ಎಂಬ ಭಾವನೆ ಕಾಡುತ್ತಿದೆ. ಆದುದರಿಂದ ಕ್ರಿಶ್ಚಿಯನ್ನರು ಕೂಡ ಎಚ್ಚೆತ್ತುಕೊಂಡು ಹೋರಾಟದಲ್ಲಿ ತೊಡಗಬೇಕು ಎಂದು ಕರೆ ನೀಡಿದರು.

ಕೆ.ಎಂ.ಸಿದ್ದೀಕ್ ಮೋಂಟುಗೋಳಿ ಮಾತನಾಡಿ, ಮುಸ್ಲಿಮರಿಗೆ ಹೋರಾಟ ಎಂಬುದು ಹೊಸದಲ್ಲ. ಸ್ವಾತಂತ್ರ ಹೋರಾಟದಲ್ಲಿ ಮುಸ್ಲಿಮರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಭಾರತದ ಮುಸ್ಲಿಮರು ಇಲ್ಲಿಯೇ ಹುಟ್ಟಿ ಬೆಳೆದವರೇ ಹೊರತು ಹೊರಗಿನಿಂದ ಬಂದವರಲ್ಲ. ಪೌರತ್ವ ಕಾಯಿದೆ ವಿರುದ್ಧ ಹೋರಾಟ ಕೇವಲ ಮುಸ್ಲಿಮರ ಅಸ್ತಿತ್ವ ಪ್ರಶ್ನೆ ಮಾತ್ರವಲ್ಲ, ಈ ದೇಶದ ಸಂವಿಧಾನಕ್ಕೆ ಎಸಗುವ ಅಪಚಾರ ಕೂಡ ಆಗಿದೆ ಎಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಪೌರತ್ವ ಕಾಯಿದೆ ಕುರಿತು ಲೋಕಸಭೆ, ರಾಜ್ಯಸಭೆಯಲ್ಲಿ ಆಗು ಹೋಗುಗಳ ಬಗ್ಗೆ ಚರ್ಚಿಸದೆ ಏಕಾಏಕಿಯಾಗಿ ರಾತ್ರಿ ಬೆಳಗಾಗುವುದರೊಳಗೆ ಜಾರಿಗೆ ತರಲಾಯಿತು. ದೇಶದ ಜನರನ್ನು ಜಾತಿ, ಧರ್ಮಗಳ ಆಧಾರದಲ್ಲಿ ವಿಂಗಡೆ ಮಾಡುವ ರಾಜಕೀಯ ಅಜೆಂಡಾ ಇಟ್ಟುಕೊಂಡು ಈ ಕಾಯಿದೆ ಜಾರಿ ತರಲಾಗಿದೆ ಎಂದು ಟೀಕಿಸಿದರು.

ಸಮಾವೇಶವನ್ನು ಮುಳೂರು ಜುಮಾ ಮಸೀದಿಯ ಖತೀಬ್ ಪಿ.ಕೆ. ಅಬ್ದುರ್ರಹ್ಮಾನ್ ಮದನಿ ಉದ್ಘಾಟಿಸಿದರು. ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ದುವಾ ನೆರವೇರಿಸಿದರು. ಕನ್ನಡ ಪರ ಹೋರಾಟಗಾರ ಮಧುಸೂದನ್‌ ಗೌಡ, ಎಸ್‌ಡಿಪಿಐ ಜಿಲ್ಲಾ ಕಾರ್ಯದಶಿರ್ ಅಶ್ರಫ್ ಮಾಚಾರ್ ಮಾತನಾಡಿದರು.

ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಮಾಜಿ ಅಧ್ಯಕ್ಷ ಚಾರ್ಲ್ಸ್ ಆ್ಯಂಬ್ಲರ್, ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಇಬ್ರಾಹಿಂ ಮಟಪಾಡಿ, ಸಮಿತಿಯ ಅಧ್ಯಕ್ಷ ಹಾಜಿ ಪಿ.ಅಬೂಬಕ್ಕರ್ ಉಪಸ್ಥಿತರಿದ್ದರು. ಸಮಿತಿಯ ಸಂಚಾಲಕ ವೈಬಿಸಿ ಬಶೀರ್ ಸ್ವಾಗತಿಸಿ ದರು. ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅಶ್ರಫ್ ರಝಾ ಅಂಜದಿ ಕಾರ್ಯಕ್ರಮ ನಿರೂಪಿಸಿದರು.

ದೇಶದಿಂದ ಓಡಿಸಲು ಸಂಚು: ಮಧುಸೂದನ್ ಗೌಡ

ಪೌರತ್ವ ಕಾಯಿದೆ ಮೂಲಕ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರನ್ನು ಈ ದೇಶದಿಂದ ಓಡಿಸಲು ಮೋದಿ ಸರಕಾರ ಸಂಚು ನಡೆಸುತ್ತಿದೆ. ಸಂವಿಧಾನವನ್ನೇ ತಿದ್ದುಪಡಿ ಮಾಡುವ ಮೂಲಕ ನಮ್ಮ ಹಕ್ಕನ್ನೆ ಕಸಿಯುವ ಹುನ್ನಾರ ನಡೆಸಲಾ ಗುತ್ತಿದೆ ಎಂದು ಕನ್ನಡ ಪರ ಹೋರಾಟಗಾರ ಮಧು ಸೂದನ್ ಗೌಡ ಹೇಳಿದರು.

ಪೌರತ್ವ ಕಾಯಿದೆ ವಿರುದ್ಧ ಹೋರಾಟ ಮಾಡುವವರು ರಾಷ್ಟ್ರಧ್ವಜ ಇಟ್ಟುಕೊಂಡರೆ, ಅದರ ಪರವಾಗಿ ಹೋರಾಡುವವರು ಕೇಸರಿ ಹಾಗೂ ಬಿಜೆಪಿ ಪಕ್ಷದ ಧ್ವಜ ಇಟ್ಟುಕೊಳ್ಳುತ್ತಿದ್ದಾರೆ. ಇದರಿಂದಲೇ ತಿಳಿಯುತ್ತದೆ ನಿಜವಾದ ದೇಶ ಪ್ರೇಮಿಗಳು ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ್ಗದವರೇ ಹೊರು ಸಂಘಪರಿವಾರದವರಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News