ಕಡೆಂಗೋಡ್ಲು ಪ್ರಶಸ್ತಿಗೆ ಕವನ ಸಂಕಲನಗಳ ಆಹ್ವಾನ

Update: 2020-01-20 15:05 GMT

ಉಡುಪಿ, ಜ.20: ನಾಡಿನ ಹಿರಿಯ ಕವಿ, ಪತ್ರಕರ್ತ ಕಡೆಂಗೋಡ್ಲು ಶಂಕರಭಟ್ಟರ ನೆನಪಿನಲ್ಲಿ 1978ರಲ್ಲಿ ಸ್ಥಾಪಿತವಾದ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಗೆ ಅಪ್ರಕಟಿತ ಕನ್ನಡ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಈ ಪ್ರಶಸ್ತಿಗೆ ಕವನ ಸಂಕಲನ ಕಳುಹಿಸಲು ಕೊನೆಯ ದಿನ ಫೆಬ್ರವರಿ 29. ಕಳುಹಿಸ ಬೇಕಾದ ವಿಳಾಸ: ಸಂಯೋಜಕರು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂಜಿಎಂ ಕಾಲೇಜು ಆವರಣ, ಉಡುಪಿ-576102.

ಕಾವ್ಯ ಪ್ರಕಟನೆಗೆ ನೆರವು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ ಕಡೆಂಗೋಡ್ಲು ಅವರ ಹೆಸರಿನಲ್ಲಿ 10,000ರೂ.ಗಳ ಒಂದು ವಾರ್ಷಿಕ ಬಹುಮಾನವನ್ನು ನೀಡಲಾಗುತ್ತಿದೆ. ಹಸ್ತಪ್ರತಿ ಹಂತದಲ್ಲಿರುವ 40ಕ್ಕೆ ಕಡಿಮೆ ಇಲ್ಲದ, 50ಕ್ಕಿಂತ ಹೆಚ್ಚಿಲ್ಲದ ಕನ್ನಡ ಕವಿತೆಗಳ ಅತ್ಯುತ್ತಮ ಸಂಗ್ರಹಕ್ಕೆ ಈ ಬಹುಮಾನ ನೀಡಲಾಗುತ್ತದೆ. ಮೂವರು ವಿಮರ್ಶಕರುಳ್ಳ ಒಂದು ತಜ್ಞರ ಸಮಿತಿ ಬಹುಮಾನಕ್ಕೆ ಅಹವಾರ್ದ ಕೃತಿಯನ್ನು ಆಯ್ಕೆ ಮಾಡಲಿದೆ.

ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಬ್ಲಾಗ್: https://govindapairesearch.blogspot.com  ಅಥವಾ ದೂರವಾಣಿ ಸಂಖ್ಯೆ: ಮೊಬೈಲ್ ನಂ.:9480575783; ಕಛೇರಿ:0820-2521159ನ್ನು ಸಂಪರ್ಕಿಸಬಹುದು.

ನಿಯಮಗಳು: ಕಳೆದ ಐದು ವರ್ಷಗಳಲ್ಲಿ ಬರೆದ ಕನ್ನಡ ಕವಿತೆಗಳು. ಬಿಡಿಯಾಗಿ ಪತ್ರಿಕೆಗಳಲ್ಲಿ ಪೂರ್ವ ಪ್ರಕಟಿತವಾದುವು ಇರಬಹುದು, ಹೊಸದಾಗಿ ರಚಿತವಾದುವೂ ಇರಬಹುದು. ಕವನ ಸಂಕಲನದಲ್ಲಿ ಕನಿಷ್ಠ 40 ಕವನಗಳು ಇರಲೇಬೇಕು. ಕವನಗಳು ಯಾವುದೇ ಕವನಸಂಕಲನದಲ್ಲಿ ಈ ಮೊದಲು ಪ್ರಕಟಗೊಂಡಿರಬಾರದು. ಸ್ಪರ್ಧೆಯಲ್ಲಿ ಭಾಗವಹಿಸುವವರ ಹೆಸರು ಮತ್ತು ವಿಳಾಸಗಳು ಪ್ರತ್ಯೇಕ ಹಾಳೆಯಲ್ಲಿರಬೇಕು ಹೊರತು ಕವನ ಸಂಕಲನದ ಯಾವ ಭಾಗದಲ್ಲೂ ಇರಬಾರದು.

ಲೇಖಕರು ತಮ್ಮ ಸಂಗ್ರಹದ ಒಂದು ನಕಲು ಪ್ರತಿಯನ್ನು (ಬೆರಳಚ್ಚು ಮಾಡಿದ) ಫೆಬ್ರವರಿ 29ರೊಳಗೆ ಸಮಿತಿಯ ವಿಳಾಸಕ್ಕೆ ಕಳುಹಿಸಬೇಕು. ಒಬ್ಬರು ಒಂದು ಕವನ ಸಂಕಲನವನ್ನು ಮಾತ್ರ ಕಳುಹಿಸಬೇಕು. ಆಯ್ಕೆ ಸಮಿತಿ ತೀರ್ಮಾನ ಪ್ರಕಟಿಸಿದ ಎರಡು ತಿಂಗಳ ಒಳಗೆ ಪ್ರಶಸ್ತಿ ವಿಜೇತ ಕವನ ಸಂಕಲನದ ಮುದ್ರಣ ಮುಗಿದು 12 ಪ್ರತಿಗಳನ್ನು ಸಮಿತಿಗೆ ನೀಡಬೇಕು ಎಂದು ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹೀರೆಗಂಗೆ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News