ಅಂಬಲಪಾಡಿ ಶ್ರೀ ಲಕ್ಷ್ಮಿಜನಾರ್ದನ ಯಕ್ಷಗಾನ ಕಲಾ ಮಂಡಳಿ: ಜ.25ರಿಂದ ವಿವಿಧ ಯಕ್ಷಗಾನ ಪ್ರಶಸ್ತಿ ಪ್ರದಾನ

Update: 2020-01-20 15:13 GMT
ಅಣ್ಣಯ್ಯಕುಲಾಲ್, ದಯಾನಂದ, ಮಧ್ಯಸ್ಥ

ಉಡುಪಿ, ಜ.20: ಅಂಬಲಪಾಡಿ ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂ ಜ.25 ಮತ್ತು 26ರಂದು ದೇವಳದ ಜನಾರ್ದನ ಸ್ವಾಮಿ ಬಯಲು ರಂಗಮಂಟಪದಲ್ಲಿ ಸಂಜೆ 6 ರಿಂದ 10 ಗಂಟೆಯವರೆಗೆ ಜರಗಲಿದೆ.

ಜ.25ರ ಸಂಜೆ 6:30ಕ್ಕೆ ನಿಡಂಬೂರು ಬೀಡು ಅಣ್ಣಾಜಿ ಬಲ್ಲಾಳ್ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ನಡೆಯಲಿದೆ. ಮಣಿಪಾಲ ಸಿಂಡಿಕೇಟ್ ಬ್ಯಾಂಕ್‌ನ ಜಿಎಂ ಭಾಸ್ಕರ ಹಂದೆ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ. ನಿ.ಬೀ ವಿಜಯ ಬಲ್ಲಾಳರು ಕೊಡಮಾಡುವ ‘ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿ’ ಯನ್ನು ಹಿರಿಯ ಯಕ್ಷಗಾನ ಸಂಘಟನೆಯಾದ ಕಾಜಾರಗುತ್ತು ಶ್ರೀ ದಶಾವತಾರ ಯಕ್ಷಗಾನ ಮಂಡಳಿಗೆ ಪ್ರದಾನ ಮಾಡಲಾಗುವುದು.

ಈ ವರ್ಷ ನೂತನವಾಗಿ ಸ್ಥಾಪನೆಗೊಂಡ ‘ನಿಡಂಬೂರುಶ್ರೀ’ ಪ್ರಶಸ್ತಿಯನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಇವರಿಗೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೆಕ್ಕಪರಿಶೋಧಕ ಗಣೇಶ್ ಕಾಂಚನ್, ಜೀವವಿಮಾ ಅಧಿಕಾರಿ ಎಸ್.ಕೆ ಆನಂದ್, ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್ ಭಾಗವಹಿಸಲಿದ್ದಾರೆ.

ಸಂಜೆ 6 ರಿಂದ 6:30ರವರೆಗೆ ಮಂಡಳಿಯ ಬಾಲಕಲಾವಿದರಿಂದ ಯಕ್ಷಗಾನ ಪೂರ್ವರಂಗ ಮತ್ತು 7:30ರಿಂದ 10 ಗಂಟೆಯವರೆಗೆ ಮಂಡಳಿಯ ಬಾಲಕಲಾವಿದರಿಂದ ‘ರುಕ್ಮಿಣೀ ಕಲ್ಯಾಣ’ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ.

ಜ.26ರಂದು ಮಂಡಳಿಯ 62ನೇ ವಾರ್ಷಿಕೋತ್ಸವ ನಡೆಯಲಿದ್ದು, ಅಂದು ಮೂವರು ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾ ಗುವುದು. ಹಿರಿಯ ಸ್ತ್ರೀವೇಷಧಾರಿ ದಯಾನಂದ ನಾಗೂರು ಇವರಿಗೆ ‘ಕಿದಿಯೂರು ಜನಾರ್ದನ ಆಚಾರ್’ ಪ್ರಶಸ್ತಿ, ಹಿರಿಯ ಹವ್ಯಾಸಿ ಕಲಾವಿದರಾದ ಅಂಬಾಗಿಲಿನ ಅಣ್ಣಯ್ಯ ಪಾಲನ್ ಇವರಿಗೆ ‘ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿ’ ಹಾಗೂ ಕೋಟದ ಹಿರಿಯ ಯಕ್ಷಗುರುಗಳಾದ ಎಂ.ಎನ್.ಮಧ್ಯಸ್ಥರಿಗೆ ‘ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ.ನಿ.ಬೀ.ವಿಜಯ ಬಲ್ಲಾಳರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಜೆ 6:30ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾದಿಗಲ್ಲು ಶ್ರೀಲಕ್ಷ್ಮೀನರಸಿಂಹ ದೇವಳದ ಧರ್ಮದರ್ಶಿ ಡಾ.ಹಾದಿಗಲ್ಲು ಲಕ್ಷ್ಮೀನಾರಾಯಣ ವಹಿಸಲಿದ್ದಾರೆ. ಅತಿಥಿ ಗಳಾಗಿ ಶಾಂತಿವನ ಟ್ರಸ್ಟ್ ಧರ್ಮಸ್ಥಳದ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಕರ್ಣಾಟಕ ಬ್ಯಾಂಕ್‌ನ ಎಜಿಎಂ ಬಿ.ಜಿ.ಸಾಮಗ, ಜೀವವಿಮಾ ಅಧಿಕಾರಿ ಕಿಶೋರ್ ಸಿ.ಉದ್ಯಾವರ ಭಾಗವಹಿಸಲಿದ್ದಾರೆ.

ಸಂಜೆ 6 ರಿಂದ 6:30ರವರೆಗೆ ಮಂಡಳಿಯ ಬಾಲ ಕಲಾವಿದರಿಂದ ಹೂವಿನ ಕೋಲು ಮತ್ತು 7:30ರಿಂದ 10 ರವರೆಗೆ ಮಂಡಳಿಯ ಸದಸ್ಯರಿಂದ ‘ಮಧುರಾ ಮಹೀಂದ್ರ’ ಯಕ್ಷಗಾನ ಪ್ರಸ್ತುತಗೊಳ್ಳಲಿದೆ ಎಂದು ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್, ಕಾರ್ಯದರ್ಶಿ ಕೆ. ಜೆ. ಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News