ವಿಕಾಸ್ ಕಾಲೇಜ್ : 'ಉತ್ತಮನಾಗು ಉಪಕಾರಿಯಾಗು -2020' ಅಭಿಯಾನಕ್ಕೆ ಚಾಲನೆ

Update: 2020-01-20 16:02 GMT

ಮಂಗಳೂರು: ನಗರದ ವಿಕಾಸ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿಕಾಸ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕದ ಸಹಯೋಗದೊಂದಿಗೆ ಯುವಜನತೆಯಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಜಾಗೃತಗೊಳಿಸುವ ‘ಉತ್ತಮನಾಗು ಉಪಕಾರಿಯಾಗು -2020’ ಎಂಬ ವಿವೇಕ ಸಂದೇಶವನ್ನು ಸಾರುವ ಅಭಿಯಾನಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ  ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹಾಗೂ ಕನ್ನಡ ಚಲನಚಿತ್ರ ನಟ ವಿಜಯರಾಘವೇಂದ್ರ ಚಾಲನೆ ದೊರೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ‘ವಿವೇಕಾನಂದರು ಇಂದಿನ ಯುಗಕ್ಕೆ ಹೆಚ್ಚು ಪ್ರಸ್ತುತ. ಈಗಿನ ಯುವ ಸಮುದಾಯಕ್ಕೆ ಮಾರ್ಗದರ್ಶನ ನೀಡಿದರೂ ಅವರನ್ನು ದಾರಿ ತಪ್ಪಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ತಿಳಿಸಿ, ಯುವಕರನ್ನು ಸರಿದಾರಿಗೆಳೆಯುವ ಪ್ರಯತ್ನ ಆಗಬೇಕು. ಆ ಮೂಲಕ ಇನ್ನೊಬ್ಬರಿಗೆ ಸ್ಪೂರ್ತಿಯಾಗುವಂತೆ ಪ್ರೇರೇಪಿಸಬೇಕು ಎಂದರು.

ಚಲನಚಿತ್ರ ನಟ ವಿಜಯರಾಘವೇಂದ್ರ ಮಾತನಾಡುತ್ತ ಈ ಅಭಿಯಾನಕ್ಕೆ ಆಯ್ದುಕೊಂಡ ‘ಜಲ ಸಂರಕ್ಷಣೆ, ಆರೋಗ್ಯಕರ ಆಹಾರ ಪದ್ದತಿ, ಎಲ್ಲರನ್ನೂ ಗೌರವಿಸಿ’ ಪರಿಕಲ್ಪನೆ ಅಭಿನಂದನೀಯ. ತಾವೂ ಅಳವಡಿಸುವ ಸಂಕಲ್ಪ ತೊಡುವುದರೊಂದಿಗೆ ಯುವ ಸಮುದಾಯವು ಈ ಮೂರು ವಿಚಾರಗಳನ್ನು ಸಮಾಜಕ್ಕೂ ಅಳವಡಿಸಿಕೊಳ್ಳಲು ಪ್ರೇರೇಪಿಸುವುದು ಶ್ಲಾಘನೀಯ ಎಂದರು.

ಉಪನ್ಯಾಸಕಿ ಅಕ್ಷಯಾ ಗೋಖಲೆ  ದಿಕ್ಸೂಚಿ ಭಾಷಣಗೈದರು. ವೇದಿಕೆಯಲ್ಲಿ ವಿಕಾಸ ಸಮೂಹ ಶಿಕ್ಷಣ ಸಂಸ್ಥೆಯ ಟ್ರಸ್ಟೀ  ಜೆ.ಕೊರಗಪ್ಪ, ತುಳು ಚಲನಚಿತ್ರ ನಟ ಅರ್ಜುನ್‍ ಕಾಪಿಕಾಡ್, ಉದ್ಯಮಿ ಸುನಿಲ್ ಆಚಾರ್, ಕಿಶೋರ್ ಶೆಟ್ಟಿ, ಗ್ರೀಷ್ಮಾ ಶ್ರೀಧರ್ ಉಪಸ್ಥಿತರಿದ್ದರು.  ಕೆ ರಾಘವೇಂದ್ರ ಭಟ್ ಸ್ವಾಗತಿಸಿ, ಉಪನ್ಯಾಸಕಿ ಮೇಘಶ್ರೀ ನಿರೂಪಿಸಿ, ಸಾಕ್ಷಾತ್‍ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News