ಶಬರಿಮಲೆಯಲ್ಲಿ ಯಾತ್ರಿ ನಿವಾಸ ನಿರ್ಮಿಸಲು ಸಚಿವರಿಗೆ ಮನವಿ

Update: 2020-01-20 16:18 GMT

ಉಡುಪಿ, ಜ.20: ಶಬರಿಮಲೆಯಲ್ಲಿ ಅಯ್ಯಪ್ಪವ್ರತಾಧಾರಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಸುಸಜ್ಜಿತ ಯಾತ್ರಿ ನಿವಾಸ ನಿರ್ಮಿಸುವಂತೆ ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರಿಗೆ ಅಯ್ಯಪ್ಪ ಭಕ್ತರು ಇತ್ತೀಚೆಗೆ ಮನವಿ ಸಲ್ಲಿಸಿದರು.

ಉಡುಪಿ ಹಿಂದೂ ಯುವಸೇನೆ ಮತ್ತು ಬನ್ನಂಜೆ ಅಯ್ಯಪ್ಪಸ್ವಾಮಿ ಭಕ್ತವೃಂದದ ನೇತೃತ್ವದಲ್ಲಿ 26ನೇ ವರ್ಷದ ಶಬರಿಮಲೆ ಯಾತ್ರೆಯ ಅಂಗವಾಗಿ ನಡೆದ ಮಹಾಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು ಮನವಿಯನ್ನು ಸ್ವೀಕರಿಸಿದರು.

ಕರ್ನಾಟಕ ಕರಾವಳಿಯಿಂದ ಪ್ರತಿವರ್ಷ ಲಕ್ಷಾಂತರ ಮಂದಿ ಅಯ್ಯಪ್ಪ ಭಕ್ತಾದಿಗಳು ಕಟ್ಟುನಿಟ್ಟಿನ ವ್ರತಾಚರಣೆ ನಡೆಸಿ ಶಬರಿಮಲೆ ಯಾತ್ರೆ ನಡೆಸು ತ್ತಿದ್ದು, ಈ ಯಾತ್ರೆಯ ಸಂದರ್ಭದಲ್ಲಿ ಸೂಕ್ತ ವಸತಿ, ಶೌಚಾಲಯ, ಪ್ರಥಮ ಚಿಕಿತ್ಸೆ, ವಿಶ್ರಾಂತಿ ಕೊಠಡಿ ಮೊದಲಾದ ಮೂಲ ಸೌಕರ್ಯಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯ ಸರಕಾರ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯಿಂದ ಪಂಪ ಅಥವಾ ಶಬರಿಮಲೆ ಸನ್ನಿಧಿಯ ಪರಿಸರದಲ್ಲಿ ರಾಜ್ಯದ ಭಕ್ತರಿಗಾಗಿ ಸುಸಜ್ಜಿತ ಯಾತ್ರಿ ನಿವಾಸ ನಿರ್ಮಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಅದೇ ರೀತಿ ಪಾದಯಾತ್ರೆಯ ಮೂಲಕ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿ ರುವ ಅಯ್ಯಪ್ಪಮಾಲಧಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳ ಬೇಕು. ಅಯ್ಯಪ್ಪ ವ್ರತಾಧಾರಿಗಳ ಅನುಕೂಲಕ್ಕಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿಯವರೆಗೆ 4 ತಿಂಗಳ ಕಾಲ ಕಾರವಾರದಿಂದ ಕೇರಳಕ್ಕೆ ವಿಶೇಷ ರೈಲು ಸೇವೆ ಒದಗಿಸುವಂತೆ ಕೇಂದ್ರ ರೈಲ್ವೆ ಇಲಾಖೆಗೆ ಶಿಫಾರಸ್ಸು ಮಾಡಬೇಕು ಎಂದು ಮನವಿಯಲ್ಲಿ ಸಚಿವರನ್ನು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಯಶ್‌ಪಾಲ್ ಸುವರ್ಣ, ವಿಜಯ್ ಗುರುಸ್ವಾಮಿ, ಹರೀಶ್ ರಾಮ್, ಸುಧಾಕರ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News