ವಾದ್ರಾ, ಭಂಡಾರಿ ವಿರುದ್ಧದ ಪ್ರಕರಣದಲ್ಲಿ ಎನ್‌ಆರ್‌ಐ ಉದ್ಯಮಿ ಥಂಪಿ ಬಂಧನ

Update: 2020-01-20 16:38 GMT

ಹೊಸದಿಲ್ಲಿ,ಜ.20: ವಿದೇಶದಲ್ಲಿ ಅಕ್ರಮವಾಗಿ ಆಸ್ತಿ ಖರೀದಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಮತ್ತು ತಲೆಮರೆಸಿಕೊಂಡಿರುವ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ ಭಂಡಾರಿ ವಿರುದ್ಧ ಅಕ್ರಮ ಹಣ ವಹಿವಾಟು ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಈ.ಡಿ.)ವು ಅನಿವಾಸಿ ಭಾರತೀಯ ಉದ್ಯಮಿ ಸಿ.ಸಿ.ಥಂಪಿ ಅವರನ್ನು ಶುಕ್ರವಾರ ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ಬಂಧಿಸಿದೆ.

ಥಂಪಿ ದುಬೈನ ಸ್ಕೈ ಲೈಟ್ ಕಂಪನಿಯನ್ನು ನಿಯಂತ್ರಿಸುತ್ತಿದ್ದಾರೆ ಎನ್ನಲಾಗಿದೆ. 2009ರಲ್ಲಿ ಭಂಡಾರಿಯ ಸ್ಯಾನ್‌ ಟೆಕ್ ಎಫ್‌ಇಝಡ್ ಸಂಸ್ಥೆಯು ಖಾಸಗಿ ಕಂಪನಿಗಾಗಿ ಲಂಡನ್‌ನ ಆಸ್ತಿಯನ್ನು ಖರೀದಿಸಿದ್ದು, ಇದನ್ನು ಸ್ಕೈ ಲೈಟ್ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತ್ತು.

ಈ ಲಂಡನ್ ಆಸ್ತಿಯನ್ನು ವಾದ್ರಾ ಖರೀದಿಸಿದ್ದಾರೆ ಎನ್ನಲಾಗಿದ್ದು, ಫ್ಲ್ಯಾಟ್‌ನ ನವೀಕರಣಕ್ಕೆ ಸಂಬಂಧಿಸಿದಂತೆ ಅವರ ಮತ್ತು ಭಂಡಾರಿ ನಡುವಿನ ಕೆಲವು ಇ-ಮೇಲ್‌ಗಳು ಪ್ರಕರಣದ ಸಾಕ್ಷಗಳಲ್ಲಿ ಸೇರಿವೆ.

ಕೆಲವು ವರ್ಷಗಳ ಹಿಂದೆ ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣದ ಸಂದರ್ಭ ತಾನು ಥಂಪಿಯನ್ನು ಭೇಟಿಯಾಗಿದ್ದೆ ಎಂದು ವಾದ್ರಾ ಈ.ಡಿ.ಗೆ ತಿಳಿಸಿದ್ದರೆನ್ನಲಾಗಿದೆ. ಆದರೆ ಸೋನಿಯಾರ ನಿಕಟವರ್ತಿಯೋರ್ವನ ಮೂಲಕ ಥಂಪಿ ವಾದ್ರಾರನ್ನು ಭೇಟಿಯಾಗಿದ್ದರು ಎಂದು ಈ.ಡಿ.ಪ್ರತಿಪಾದಿಸಿದೆ.

ವಾದ್ರಾ ಲಂಡನ್‌ನ ಬ್ರಾನ್‌ಸ್ಟನ್ ಸ್ಕ್ವೇರ್‌ನಲ್ಲಿರುವ ಫ್ಲಾಟ್‌ನಲ್ಲಿ ವಾಸವಾಗಿದ್ದರು ಎಂದು ಥಂಪಿ ಈ ಹಿಂದೆ ಈ.ಡಿ.ವಿಚಾರಣೆಯ ಸಂದರ್ಭದಲ್ಲಿ ತಿಳಿಸಿದ್ದರು. ಆದರೆ ವಾದ್ರಾ ಈ.ಡಿ.ಗೆ ನೀಡಿರುವ ಹೇಳಿಕೆಯಲ್ಲಿ ಇದನ್ನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News