ಹೊಯ್ಗೆ ಬಜಾರ್-ಮಲ್ಪೆಯಲ್ಲಿ ತೇಲುವ ಜೆಟ್ಟಿ ನಿರ್ಮಾಣ: ಸಚಿವ ಕೋಟ

Update: 2020-01-20 16:42 GMT

ಮಂಗಳೂರು, ಜ.20: ನಗರದ ಹೊಯ್ಗೆ  ಬಜಾರ್ ಮತ್ತು ಮಲ್ಪೆಯಲ್ಲಿ ತಲಾ 6.5 ಕೋ.ರೂ. ವೆಚ್ಚದಲ್ಲಿ ತೇಲುವ ಜೆಟ್ಟಿಯನ್ನು ನಿರ್ಮಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ತೋಟ ಬೆಂಗರೆ ಮಹಾಜನ ಸಭಾ ವತಿಯಿಂದ ಪ್ರಯಾಣಿಕರ ಸಂಚಾರಕ್ಕಾಗಿ ನೂತನವಾಗಿ ನಿರ್ಮಾಣಗೊಂಡಿರುವ ಕುಮಾರಧಾರ ನಾವೆ ಹಾಗೂ ಬೋಳೂರು ಸುಲ್ತಾನ್‌ಬತ್ತೇರಿ ಬಳಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಪ್ರಯಾಣಿಕರ ಜೆಟ್ಟಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮೀನುಗಾರಿಕೆಗೆ ಅನುಕೂಲವಾಗುವಂತೆ ಜೆಟ್ಟಿ ನಿರ್ಮಾಣ ಮಾಡಲು ರಾಜ್ಯ ಸರಕಾರ ಮುಂದಾಗಿದೆ. ಅದಕ್ಕೆ ಮುಂಚಿತವಾಗಿ ಪ್ರಾಯೋಗಿಕ ವ್ಯವಸ್ಥೆಯಲ್ಲಿ ತೇಲುವ ಜೆಟ್ಟಿ ನಿರ್ಮಿಸಲು ಸೂಚನೆ ನೀಡಲಾಗಿದೆ. ಧಾರಣಾ ಸಾಮರ್ಥ್ಯ ಸಹಿತ ತಾಂತ್ರಿಕ ವ್ಯವಸ್ಥೆಗಳನ್ನು ಪರಿಶೀಲಿಸಲು ತಜ್ಞರಿಗೆ ಸೂಚಿಸಲಾಗಿದೆ. ತಾಂತ್ರಿಕ ಅನುಮೋದನೆ ದೊರೆತ ಬಳಿಕ ಜೆಟ್ಟಿ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಕೋಟ ತಿಳಿಸಿದರು.

ಸಮುದ್ರ ಕಿನಾರೆಯಲ್ಲಿ ಮೀನುಗಾರಿಕೆ ಮೂಲಕ ಬದುಕು ಕಟ್ಟಿಕೊಂಡವರ ಭದ್ರತೆಗೆ ರಾಜ್ಯ ಸರಕಾರ ಸಕಲ ಕ್ರಮ ಕೈಗೊಳ್ಳಲಿದೆ. ಕೃಷಿ ಮಾದರಿಯಲ್ಲೂ ಮೀನುಗಾರಿಕೆ ಕುಟುಂಬಗಳಿಗೆ ಕ್ರೆಡಿಟ್ ಕಾರ್ಡ್ ನೀಡುವ ಯೋಜನೆ ಆರಂಭವಾಗಿದೆ. ಇದನ್ನು ಎಲ್ಲ ಮೀನುಗಾರಿಕಾ ಕುಟುಂಬದವರಿಗೆ ವಿಸ್ತರಿಸಲಿದ್ದೇವೆ ಎಂದ ಕೋಟ, ಅಳಿವೆಬಾಗಿಲಿನಲ್ಲಿ ಹೂಳು ತುಂಬಿ ಮೀನುಗಾರರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಇದಕ್ಕಾಗಿ 29 ಕೋ.ರೂ. ಅನುದಾನ ಲಭ್ಯವಿದ್ದು, ಟೆಂಡರ್ ಹಂತದಲ್ಲಿದೆ. ಶೀಘ್ರದಲ್ಲಿ ಡ್ರೆಜ್ಜಿಂಗ್ ಕಾಮಗಾರಿ ಆರಂಭವಾಗಲಿದೆ ಎಂದರು.

ಬೆಂಗರೆ, ತಣ್ಣೀರುಬಾವಿ ಪರಿಸರದ ಹಲವರಿಗೆ ಹಕ್ಕುಪತ್ರ ನೀಡಲಾಗಿದೆ. ಆದರೆ ಆರ್‌ಟಿಸಿ ಇಲ್ಲದೆ ಬ್ಯಾಂಕ್ ಸಾಲ ಮತ್ತಿತರ ಪ್ರಕ್ರಿಯೆಗಳಿಗೆ ಅಡ್ಡಿಯಾಗುತ್ತಿದೆ ಎಂಬ ದೂರು ಇದೆ. ಇದಕ್ಕಾಗಿ ಜಿಲ್ಲಾಕಾರಿ, ತಹಶೀಲ್ದಾರ್ ಜತೆ ಸಭೆ ನಡೆಸಲಿದ್ದೇವೆ. ಈ ಸಮಸ್ಯೆ ಬಗ್ಗೆ ಕಂದಾಯ ಸಚಿವರ ಗಮನಕ್ಕೂ ತರಲಿದ್ದೇವೆ ಎಂದು ಸಚಿವ ಕೋಟ ಭರವಸೆ ನೀಡಿದರು.

ಶಾಸಕ ಡಿ.ವೇದವ್ಯಾಸ್ ಕಾಮತ್ ಮಾತನಾಡಿ, ಹಳೆ ಬಂದರು ಪರಿಸರದಲ್ಲಿ ಸ್ಥಗಿತಗೊಂಡಿದ್ದ ಮೂರನೇ ಹಂತದ ಜೆಟ್ಟಿ ವಿಸ್ತರಣೆ ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಮೀನುಗಾರರಿಗೆ ಮೀನು ಲಭ್ಯವಾಗದೆ ನಷ್ಟ ಅನುಭವಿಸುತ್ತಿದ್ದಾರೆ. ಅವರಿಗೆ ಗುಜರಾತ್ ಮಾದರಿಯಲ್ಲಿ ಸೀವಿಡ್ ಬಳ್ಳಿಗಳನ್ನು ಬೆಳೆಯುವ ಬಗ್ಗೆ ತರಬೇತಿ ನೀಡುವ ಅಗತ್ಯವಿದೆ. ಬೆಂಗರೆಯಲ್ಲಿ ಪೊಲೀಸ್ ಔಟ್‌ಪೋಸ್ಟ್ ನಿರ್ಮಾಣಕ್ಕಾಗಿ, ಈ ಬಗ್ಗೆ ಉಸ್ತುವಾರಿ ಸಚಿವರ ಗೃಹಸಚಿವರ ಗಮನಕ್ಕೆ ತಂದಿದ್ದಾರೆ ಎಂದರು.

ಬೆಂಗರೆ ಮಹಾಸಭಾ ಅಧ್ಯಕ್ಷ ಚೇತನ ಬೆಂಗರೆ ಸ್ವಾಗತಿಸಿದರು. ಬೆಂಗರೆ ಎಸ್‌ಎಂಬಿ ಸರ್ವಿಸ್ ಅಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಕಾರ್ಪೊರೇಟರ್ ಮುನೀರ್ ಬೆಂಗರೆ, ಸುನಿತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News