ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ: ತನಿಖೆಗೆ ಎಸ್‌ಡಿಪಿಐ ಆಗ್ರಹ

Update: 2020-01-20 17:10 GMT

ಮಂಗಳೂರು, ಜ.20: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣವು ಆತಂಕಕಾರಿ ವಿಚಾರವಾಗಿದೆ. ಈ ಪ್ರಕರಣದ ವಾಸ್ತವವನ್ನು ಬಹಿರಂಗ ಪಡಿಸಲು ಎಸ್‌ಡಿಪಿಐ ಜಿಲ್ಲಾ ಸಮಿತಿಯು ಆಗ್ರಹಿಸಿದೆ.

 ‘ಪ್ರಕರಣವು ಸಂಶಾಯಸ್ಪದ ರೀತಿಯಲ್ಲಿ ಸಾಗುತ್ತಿದೆ. ಪತ್ತೆಯಾಗಿರುವ ಸ್ಫೋಟಕವನ್ನು ಒಮ್ಮೆ ಆಟೋ ರಿಕ್ಷಾದಲ್ಲಿ ತಂದಿಡಲಾಗಿದೆ ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಸೂಕ್ಷ್ಮ ಸ್ಥಳಗಳಲ್ಲಿ ಸುಸ್ಥಿಯಲ್ಲಿರಬೇಕಾದ ಸಿಸಿಕ್ಯಾಮರಾಗಳು ಕಾರ್ಯನಿರ್ವಹಣೆ ಮಾಡುತ್ತಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವುದರಿಂದ ಜನರಿಗೆ ಈ ಪ್ರಕರಣದ ಬಗ್ಗೆ ಗೊಂದಲ ಮೂಡಿಸುವಂತಾಗಿದೆ’ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ದೇಶದ ಯಾವುದೇ ಭಾಗದಲ್ಲಿ ನಡೆದ ಸ್ಫೋಟಕ ಪ್ರಕರಣಗಳನ್ನು ಅಲ್ಪಸಂಖ್ಯಾತ ಸಮುದಾಯದ ಯುವಕರ ತಲೆಗೆ ಕಟ್ಟಿ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯುವಂತೆ ಮಾಡಿ ಕೊನೆಗೆ ನಿರಪರಾಧಿಯಾಗಿ ಹೊರ ಬರುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಅತೀ ಸೂಕ್ಷ್ಮನಗರವಾದ ಮಂಗಳೂರಿನಲ್ಲಿ ಕೂಡ ಅದೇ ರೀತಿ ಮಾಡಿ ಮುಂದಿನ ದಿನಗಳಲ್ಲಿ ಈ ಪ್ರಕರಣವನ್ನು ಕೂಡ ಅಲ್ಪಸಂಖ್ಯಾತರ ತಲೆಗೆ ಕಟ್ಟುವ ಯೋಜನೆಯೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಿಂದಿನಿಂದಲೂ ಅಲ್ಪಸಂಖ್ಯಾತ ಸಮುದಾಯದ ಜನರನ್ನು ವಿನಾಕಾರಣ ತನಿಖೆಯ ನೆಪದಲ್ಲಿ ಅನಗತ್ಯ ತೊಂದರೆ ಕೊಡುವ ಜಾಯಮಾನವು ನಡೆಯುತ್ತಾ ಬಂದಿದೆ. ಇದೀಗ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೆ ಸಿಲುಕಿಸುವ ಸಾಧ್ಯತೆಯಿದೆ’ ಎಂದು ಅವರು ಶಂಕೆ ವ್ಯಕ್ತಪಡಿಸಿದರು.

‘ಅತ್ಯಂತ ಕಠಿಣ ಭದ್ರತಾ ತಪಾಸಣಾ ಇರುವ ಈ ವಿಮಾನ ನಿಲ್ದಾಣದಲ್ಲಿ ಸುತ್ತಮುತ್ತಲಿನ ಎಲ್ಲಡೆ ಕೂಡ ಸಿಸಿ ಕ್ಯಾಮರ, ಪೋಲಿಸ್ ಮತ್ತು ಸೈನಿಕರ ಭದ್ರತೆ ಇರುವಾಗ ಒಳಗಡೆ ಸಣ್ಣ ಬ್ಲೇಡ್‌ನ್ನು ಸಾಗಿಸಲು ಅನುಮತಿ ಇರದಂತಹ ಇಂತಹ ಸೂಕ್ಷ್ಮ ಜಾಗಕ್ಕೆ ಅನುಮಾನಾಸ್ಪದ ವ್ಯಕ್ತಿ ಬಂದು ಸ್ಫೋಟಕ ತರಲು ಹೇಗೆ ಸಾದ್ಯವಾಯಿತು ? ಈ ಬಗ್ಗೆ ಎಲ್ಲ ಸಂಶಯ ಮತ್ತು ಗೊಂದಲ ನಿವಾರಿಸಲು ಸರಕಾರವು ಉನ್ನತ ಪೊಲೀಸ್ ಅಧಿಕಾರಿಗಳ ಮೂಲಕ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತರಬೇಕು’ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News