ಜ. 23ಕ್ಕೆ ಕರ್ನಾಟಕ ವೈದ್ಯಕೀಯ ಪರಿಷತ್ತಿನ ಸದಸ್ಯತ್ವಕ್ಕೆ ಚುನಾವಣೆ

Update: 2020-01-21 12:04 GMT

ಮಂಗಳೂರು : ಕರ್ನಾಟಕ ವೈದ್ಯಕೀಯ ಪರಿಷತ್ತಿನ ಸದಸ್ಯತ್ವಕ್ಕೆ ಜ.23ರಂದು ಚುನಾವಣೆಗಳು ನಡೆಯಲಿವೆ.

ಕರ್ನಾಟಕ ವೈದ್ಯಕೀಯ ಪರಿಷತ್ತು ಎಂಬಿಬಿಎಸ್/ಎಂಡಿ/ಎಂಎಸ್/ಎಂಸಿಎಚ್/ಡಿಎಂ ಮುಂತಾದ ಆಧುನಿಕ ವೈದ್ಯ ವಿಜ್ಞಾನದ ಪದವೀಧರರನ್ನು ನೋಂದಾಯಿಸಿ ಅವರ ವೃತ್ತಿ ನೈತಿಕತೆಯನ್ನು ನಿಯಂತ್ರಿಸುವ ಸಾಂವಿಧಾನಿಕ ಸಂಸ್ಥೆಯಾಗಿದೆ.

ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ ಆಗಸ್ಟ್ 2011ರಲ್ಲಿ ಅಂಚೆ ಮತದಾನದ ಮೂಲಕ ಚುನಾವಣೆಗಳು ನಡೆದಿದ್ದವು. ನಿಯಮಾನುಸಾರ ಐದು ವರ್ಷಗಳ ಬಳಿಕ, ಅಂದರೆ ಆಗಸ್ಟ್ 2016ರಲ್ಲಿ ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ ಮತ್ತೆ ಚುನಾವಣೆಗಳು ನಡೆಯಬೇಕಾಗಿದ್ದವು. ಆದರೆ ಅವನ್ನು ನಡೆಸದಾಗ ರಾಜ್ಯದ ಕೆಲವು ವೈದ್ಯರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಆರ್ಜಿ ಸಲ್ಲಿಸಿ (48880/2016) 2018ರ ಡಿಸೆಂಬರ್ ನಲ್ಲಿ ನ್ಯಾಯಾಲಯವು ಎರಡು ತಿಂಗಳಲ್ಲಿ ಚುನಾವಣೆ ನಡೆಸುವಂತೆ ಆದೇಶ ನೀಡಿತು. ಆದರೆ  ಕರ್ನಾಟಕ ವೈದ್ಯಕೀಯ ಪರಿಷತ್ತು ಅದನ್ನು ಕಡೆಗಣಿಸಿದಾಗ ಆಗಸ್ಟ್ 2019ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ  (CCC1466/2019) ಸಲ್ಲಿಸಿ ಜ. 23 ರಂದು ಚುನಾವಣೆ ನಡೆಸುವಂತೆ ಆದೇಶವನ್ನು ಪಡೆಯಲಾಯಿತು.

ಆದರೆ ಕರ್ನಾಟಕ ವೈದ್ಯಕೀಯ ಪರಿಷತ್ತಿನ ರಿಜಿಸ್ಟ್ರಾರ್ ಅವರು ಸಿದ್ಧಪಡಿಸಿದ ಮತದಾರರ ಪಟ್ಟಿಯಲ್ಲಿ ನೋಂದಾಯಿತ 1,28,000 ವೈದ್ಯರ ಪೈಕಿ ಕೇವಲ 42,000 ವೈದ್ಯರನ್ನಷ್ಟೇ ಸೇರಿಸಿದಾಗ ವೈದ್ಯರು ಮತ್ತೆ ಉಚ್ಚ ನ್ಯಾಯಾಲಯದ ಮೊರೆ ಹೋದರು (IA1/2020 on WP40580/2017). ಈ ಅರ್ಜಿಯನ್ನು 2020ರ ಜ.10ರಂದು  ಪುರಸ್ಕರಿಸಿದ ನ್ಯಾಯಾಲಯವು ಬಿಟ್ಟು ಹೋಗಿರುವ ಹೆಸರುಗಳ ಬಗ್ಗೆ ಆಕ್ಷೇಪಣೆಗಳನ್ನು ಪರಿಗಣಿಸಿ ಸೇರಿಸುವುದಕ್ಕೆ ಚುನಾವಣಾಧಿಕಾರಿಗಳಾಗಿರುವ ಸಹಕಾರಿ ಸಂಸ್ಥೆಗಳ ಜಂಟಿ ರಿಜಿಸ್ಟ್ರಾರ್ ಅವರಿಗೆ ಅಧಿಕಾರವನ್ನು ನೀಡಿತ್ತು.

ಆದರೆ ಇನ್ನೊಬ್ಬರು ಜ. 17ರಂದು ಕಲ್ಬುರ್ಗಿ ಪೀಠದಲ್ಲಿ ಅರ್ಜಿ ಸಲ್ಲಿಸಿ ಚುನಾವಣಾಧಿಕಾರಿಗಳಿಗೆ ನೀಡಲಾಗಿದ್ದ ಅಧಿಕಾರವನ್ನು ರದ್ದು ಪಡಿಸುವಲ್ಲಿ ಯಶಸ್ವಿಯಾದರು. ಚುನಾವಣೆಗಾಗಿ ಹೋರಾಡಿದ್ದ ವೈದ್ಯರು ಜ. 20ರಂದು ಕಲಬುರ್ಗಿ ಪೀಠದ ಮುಂದೆ ಈ ಆದೇಶವನ್ನು ರದ್ದು ಪಡಿಸುವಂತೆ ಅರ್ಜಿ ಸಲ್ಲಿಸಿ ಯಶಸ್ವಿಯಾದರು. ಅದರೊಂದಿಗೆ, ಚುನಾವಣಾಧಿಕಾರಿಗಳೇ ಮತದಾರರ ಪಟ್ಟಿಯ ಬಗ್ಗೆ ನಿರ್ಣಯಿಸುವ ಅಧಿಕಾರವನ್ನು ಪಡೆದಿದ್ದು, ಬಿಟ್ಟು ಹೋಗಿರುವ ವೈದ್ಯರ ಹೆಸರುಗಳು ಮತ್ತೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಹಾದಿ ಸುಗಮವಾದಂತಾಗಿದೆ.

ಕಲಬುರ್ಗಿ ನ್ಯಾಯಾಲಯ ಪೀಠದೆದುರು ದೊರೆರಾಜ್ ಹಾಗೂ ಬೆಂಗಳೂರು ಪೀಠದೆದುರು ಎಸ್ ಬಸವರಾಜ್ ಅವರು ವೈದ್ಯರ ಪರವಾಗಿ  ವಾದ ಮಂಡಿಸಿದ್ದರು. ಜನಸಾಮಾನ್ಯರಿಗೂ, ವೈದ್ಯರಿಗೂ ನ್ಯಾಯವೊದಗಿಸಬೇಕಾದ ವೈದ್ಯಕೀಯ ಪರಿಷತ್ತಿನಲ್ಲೇ ನ್ಯಾಯ ಹಾಗೂ ಪ್ರಜಾಸತ್ತೆಗಾಗಿ ನ್ಯಾಯಿಕ ಹೋರಾಟದ ಬಳಿಕ ಈಗ ಚುನಾವಣೆ ನಡೆಯುತ್ತಿದೆ.

ಇದುವರೆಗೆ ಅಂಚೆ ಮತದಾನದ ಮೂಲಕ ನಡೆಯುತ್ತಿದ್ದ ಚುನಾವಣೆಗಳು ಇದೇ ಮೊದಲ ಬಾರಿಗೆ ನೇರ ಮತದಾನದ ಮೂಲಕ ನಡೆಯುತ್ತಿದ್ದು, ಸಹಕಾರಿ ಸಂಸ್ಥೆಗಳ ಇಲಾಖೆಯ ಮೂಲಕ ನಡೆಯುತ್ತಿವೆ. ಎಲ್ಲಾ ಜಿಲ್ಲೆಗಳಲ್ಲೂ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಮುಕ್ತ ಹಾಗೂ ನ್ಯಾಯೋಚಿತ ಚುನಾವಣೆಗಳಾಗಿ ಸಕಲ ಸಿದ್ಧತೆಗಳೂ ಆಗುತ್ತಿವೆ. ಜ.23ರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತದಾರರ ಪಟ್ಟಿ ಹಾಗೂ ಮತಕೇಂದ್ರಗಳ ವಿವರಗಳನ್ನು http://kmcelecyion2020ro.in ನಿಂದ ಪಡೆಯಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News