ಜ.24-26: ಫಲಪುಷ್ಪ ಪ್ರದರ್ಶನ

Update: 2020-01-21 12:28 GMT

ಮಂಗಳೂರು, ಜ.21: ತೋಟಗಾರಿಕೆ ಇಲಾಖೆ, ದ.ಕ. ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ವತಿಯಿಂದ ಸಿರಿ ತೋಟಗಾರಿಕೆ ಸಂಘದ ಸಹಯೋಗದೊಂದಿಗೆ ಫಲಪುಷ್ಪ ಪ್ರದರ್ಶನ ಜ.24ರಿಂದ 26ರವರೆಗೆ ಕದ್ರಿ ಉದ್ಯಾನವನದಲ್ಲಿ ಆಯೋಜಿಸಲಾಗಿದೆ.

24ರಂದು ಬೆಳಗ್ಗೆ 11ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರದರ್ಶನ ಉದ್ಘಾಟಿಸಲಿದ್ದಾರೆ. ತೋಟಗಾರಿಕಾ ಇಲಾಖೆಯ ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸುವುದು ಪ್ರದರ್ಶನ ಆಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ. ಬಣ್ಣದ ಹೂಗಳಿಂದ ಅಲಂಕರಿಸಿದ ‘ಪಾರಿವಾಳದ ಕಲಾಕೃತಿ’ ಈ ಬಾರಿಯ ಪ್ರದರ್ಶನದ ವಿಶೇಷತೆಯಾಗಿದೆ. ಜತೆಗೆ ಇಲಾಖೆ ವತಿಯಿಂದ ಬೆಳೆಸಲಾಗಿರುವ ವಿವಿಧ ಜಾತಿಯ ಆಕರ್ಷಕ ಹೂಗಳ ಪ್ರದರ್ಶನ, ತರಕಾರಿ ಸಸಿ ಹಾಗೂ ಇತರೆ ತೋಟಗಾರಿಕೆ ಗಿಡಗಳನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್.ನಾಯ್ಕಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ನರ್ಸರಿ, ಬೀಜ-ಗೊಬ್ಬರ ಮಾರಾಟಗಾರರು, ಯಂತ್ರೋಪಕರಣ ಮಾರಾಟ ಮಳಿಗೆ, ಸಾವಯವ ಉತ್ಪನ್ನಗಳು, ತೋಟಗಾರಿಕೆ ಉತ್ಪನ್ನಗಳು, ವೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆದಾರ ಮಳಿಗೆಗಳು ಪ್ರದರ್ಶನ ಸ್ಥಳದಲ್ಲಿ ಇರಲಿವೆ. ಅಣಬೆ ಮಾದರಿಗಳು, ತೋಟಗಾರಿಕೆ ಬೆಳೆಗಳಲ್ಲಿ ಕಾಣಸಿಗುವ ಕೀಟಗಳ ಮಾದರಿ, ತರಕಾರಿ ಕೆತ್ತನೆ, ಜೇನು ಸಾಕಾಣಿಕೆ ಮಾದರಿ ಹಾಗೂ ವಿವಿಧ ಕಟ್ ್ಲವರ್ ಜೋಡಣೆ, ಜೇನು ಕೃಷಿ ಮಾಹಿತಿ ಹಾಗೂ ಜೇನಿನ ವೌಲ್ಯವರ್ಧಿತ ಉತ್ಪನ್ನಗಳ ಮಾರಾಟ ನಡೆಯಲಿದೆ. ಕೈತೋಟದ ಪ್ರಾತ್ಯಕ್ಷಿಕೆ ಸೇರಿದಂತೆ 150ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸಾರ್ವಜನಿಕರಿಗೆ ತೋಟಗಾರಿಕೆ ಕೃಷಿಗಳ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದವರು ತಿಳಿಸಿದರು.

25ರಂದು ಮಧ್ಯಾಹ್ನ 3ರಿಂದ ಮಕ್ಕಳಿಗೆ ತರಕಾರಿ-ಹೂ-ಹಣ್ಣು-ಬೀಜಗಳನ್ನು ಗುರುತಿಸುವ ಸ್ಪರ್ಧೆ ನಡೆಯಲಿದೆ. ಸಮವಸ್ತ್ರ ಧರಿಸಿದ ಶಾಲಾ ಮಕ್ಕಳಿಗೆ, ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಹಾಗೂ ಅಂಗವಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಉಳಿದಂತೆ 12ರಿಂದ 15 ವರ್ಷದ ಮಕ್ಕಳಿಗೆ 10 ರೂ. ಮತ್ತು ಹಿರಿಯರಿಗೆ 20 ರೂ. ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿದೆ. 1 ರೂಪಾಯಿಗೆ ಒಂದು ತರಕಾರಿ ಗಿಡ ನೀಡುವ ಯೋಜನೆ ಕಳೆದ ವರ್ಷ ಯಶಸ್ವಿಯಾಗಿದ್ದು, ಈ ಬಾರಿಯೂ 30 ಸಾವಿರ ಗಿಡಗಳನ್ನು ವಿತರಿಸಲು ಉದ್ದೇಶಿಸಲಾಗಿದೆ ಎಂದು ಎಚ್.ಆರ್.ನಾಯ್ಕಿ ತಿಳಿಸಿದರು.

ಕದ್ರಿ ಪಾರ್ಕ್ ಅಭಿವೃದ್ಧಿ ಸಮಿತಿ ಪ್ರಮುಖರಾದ ಜಗನ್ನಾಥ ಗಾಂಭೀರ್, ಜಿ. ಕೆ.ಭಟ್, ಸಿರಿ ತೋಟಗಾರಿಕೆ ಸಂಘದ ಅಧ್ಯಕ್ಷೆ ಡಾ.ಭಾರತಿ ನಿರ್ಮಲಾ, ಕೋಶಾಧಿಕಾರಿ ಶಾರದಾ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News