'ಮಹನೀಯರ ಜಯಂತಿಗಳ ಆಚರಣೆ ಕಾಟಾಚಾರಕ್ಕೆ ಬೇಡ'

Update: 2020-01-21 14:52 GMT

ಉಡುಪಿ, ಜ.21: ಸರಕಾರದ ವತಿಯಿಂದ ಆಚರಿಸಲಾಗುವ 25ಕ್ಕೂ ಹೆಚ್ಚು ಮಹನೀಯರ ಜಯಂತಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ಹಾಗೂ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕ ರಿಂದ, ವಿವಿಧ ಸಮುದಾಯಗಳ ಮುಖಂಡರಿಂದ ಅಭಿಪ್ರಾಯಗಳನ್ನು ಪಡೆಯಲು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾದ ಸಭೆಯಲ್ಲಿ ಜಯಂತಿಗಳನ್ನು ಕಾಟಾಚಾರಕ್ಕೆ ಆಚರಿಸದೆ ಅರ್ಥಪೂರ್ಣವಾಗಿ ಮಾಡಬೇಕೆಂಬ ಸಲಹೆಗಳು ವ್ಯಕ್ತವಾದವು.

ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಜಯಂತಿಗಳ ಆಚರಣೆ ನಿಲ್ಲಿಸುವುದು ಬೇಡ. ಆದರೆ ಸೂಕ್ತ ಕ್ರಿಯಾಯೋಜನೆ ರೂಪಿಸಿಕೊಂಡು, ಸಾಂಸ್ಕೃತಿಕ ಸಂಘಟನೆಗಳ ಮೂಲಕ, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಅರ್ಥಪೂರ್ಣ ವಾಗಿ ಆಚರಣೆ ನೆಸಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಆಚರಿಸುವ ವಿಶ್ವಕರ್ಮ ಜಯಂತಿ ಸಮಂಜಸವಲ್ಲ. ಆದುದರಿಂದ ಇದರ ಬದಲಿಗೆ ವಿಶ್ವಕರ್ಮ ದಿನಾಚರಣೆಯನ್ನು ಆಚರಿಸಬೇಕು. ಅದೇ ವಿಶ್ವಕರ್ಮ ಭಾವಚಿತ್ರವನ್ನು ಬದಲಾಯಿಸಬೇಕೆಂದು ವಿಶ್ವಕರ್ಮ ಮುಖಂಡರು ಸಭೆಯಲ್ಲಿ ಒತ್ತಾಯಿಸಿ ದರು. ಜಯಂತಿಗಳು ಕಾಟಾಚಾರದ ಆಚರಣೆಯಾಗದೆ ಅರ್ಥಪೂರ್ಣವಾಗಿರಬೇಕು. ಇದಕ್ಕಾಗಿ ಶಾಲೆ, ಆಸ್ಪತ್ರೆ ಮತ್ತು ಬಸದಿ ಗಳಲ್ಲಿ ಉಪಯೋಗವಾಗುವಂತಹ ಕಾರ್ಯಗಳನ್ನು ಹಮ್ಮಿಕೊಂಡರೆ ಜಯಂತಿಗೆ ತಕ್ಕುದಾದ ಬೆಲೆ ಸಿಗುತ್ತದೆ ಎಂದು ಜೈನ ಸಮುದಾಯದ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹೇಳಿದರು.

ರಜಾ ದಿನಗಳಂದು ಆಚರಿಸಿ: ಶ್ರೀನಾರಾಯಣಗುರು, ವಿಶ್ವಕರ್ಮ, ಮಹಾವೀರ ಸೇರಿದಂತೆ ಹಲವು ಮಹನೀಯರ ಜಯಂತಿ ಗಳನ್ನು ಜಿಲ್ಲಾಡಳಿತ ವತಿಯಿಂದ ಆಚರಿಸುವ ಸಮಯದಲ್ಲಿ ಆಯಾ ಸಮುದಾಯದವರಿಗೆ ತಮ್ಮ ತಮ್ಮ ಮಂದಿರಗಳಲ್ಲಿ ಪೂಜೆ ಹಾಗೂ ಆಚರಣೆಗಳಿರುತ್ತವೆ. ಇದರಿಂದಾಗಿ ಈ ಜಯಂತಿ ಆಚರಣೆಯಲ್ಲಿ ಭಾಗವಹಿಸಲು ಹೆಚ್ಚಿನವರಿಗೆ ಸಾಧ್ಯವಾಗುವು ದಿಲ್ಲ ಎಂಬ ಮಾತುಗಳು ಕೇಳಿಬಂದವು.

ಆದುದರಿಂದ ಮಹನೀಯರ ಜಯಂತಿಗಳನ್ನು ಆ ದಿನದ ಬದಲು ಇತರೆ ದಿನ ಅಥವಾ ರಜಾ ದಿನಗಳಂದು ಎಲ್ಲ ಸಮುದಾಯ ಗಳನ್ನು ಕರೆಸಿ ಆಚರಿಸ ಬೇಕು. ಜಯಂತಿ ಆಚರಣೆಯ ಸಿದ್ಧತೆಗಳನ್ನು ಅಂತಿಮ ಹಂತದಲ್ಲಿ ಮಾಡದೆ, ಸಾಕಷ್ಟು ಪೂರ್ವ ತಯಾರಿ ನಡೆಸಿಕೊಂಡು ಆಚರಿಸಬೇಕು ಎಂದು ವಿವಿಧ ಸಮಾಜದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿವಿಧ ಮಹನೀಯರ ಜಯಂತಿಗಳಿಗಾಗಿ ಸರಕಾರ ಪ್ರತಿ ವರ್ಷ ಸುಮಾರು 17 ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಜಯಂತಿಗಳ ಆಚರಣೆಗೆ ನೀಡುವ ಅನುದಾನವನ್ನು ಆಯಾ ಸಮುದಾಯಗಳ ಸಂಘಗಳಿಗೆ ನೀಡಿ, ಆಚರಣೆಯ ಜವಾಬ್ದಾರಿಯನ್ನು ಆಯಾ ಮುಖಂಡರಿಗೆ ನೀಡಬೇಕು. ಮಹನೀಯರ ಸಾಧನೆ ಕುರಿತ ಪುಸ್ತಕಗಳನ್ನು ಮುದ್ರಿಸಿ ಹಂಚಬೇಕು ಎಂದು ನಿವೃತ್ತ ಪ್ರಾಂಶು ಪಾಲ ಮೇಟಿ ಮುದಿಯಪ್ಪ ತಿಳಿಸಿದರು.

ಜಯಂತಿಗಳನ್ನು ಸರಕಾರ ಆಚರಿಸುವ ಬದಲು ಆಯಾ ಸಮುದಾಯ ದವರು ಆಚರಿಸುವಂತೆ ಮಾಡಬೇಕು. ಜಯಂತಿಗೆ ನೀಡುವ ಅನುದಾನವನ್ನು ಆಯಾ ಸಮುದಾಯದ ಮಕ್ಕಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿವೇತನ ವಾಗಿ ನೀಡಬೇಕು ಎಂದು ಬಸವ ಸಮಿತಿಯ ಶಾಂತಾಗೌಡ ಅಭಿಪ್ರಾಯ ಪಟ್ಟರು.

ಸಭೆಯಲ್ಲಿ ಉಡುಪಿ ತಾಪಂ ಅಧ್ಯಕ್ಷೆ ನೀತಾಗುರುರಾಜ್ ಪೂಜಾರಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಸಹಾಯಕ ಆಯುಕ್ತ ಕೆ.ರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ಶೇಷಪ್ಪ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಸರಕಾರಕ್ಕೆ ವರದಿ: ಜಿಲ್ಲಾಧಿಕಾರಿ

ಜಯಂತಿಗಳ ಆಚರಣೆ ಮತ್ತು ಸ್ವರೂಪದ ಕುರಿತು ಸಾರ್ವಜನಿಕರ ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಿ ರಾಜ್ಯ ಸರಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಮಹನೀಯರು ಜಾತಿ, ಮತ, ಪಂಥಗಳನ್ನು ಮೀರಿ ಬೆಳೆದವರು. ಸಭೆಯಲ್ಲಿ ನೀಡಿದ ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು. ಮುಂದೆ ಸರಕಾರ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News