ಉಡುಪಿ ಬಿಷಪ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ: ಕೆಥೊಲಿಕ್ ಸಭಾದಿಂದ ಎಸ್ಪಿಗೆ ದೂರು

Update: 2020-01-21 14:57 GMT

ಉಡುಪಿ, ಜ.21: ಸಾಮಾಜಿಕ ಜಾಲತಾಣಗಳಲ್ಲಿ ಉಡುಪಿ ಕೆಥೊಲಿಕ್ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ವಿರುದ್ಧ ಕೆಟ್ಟ ಭಾಷೆಯಲ್ಲಿ ನಿಂದಿಸಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ದನ್ ಅವರಿಗೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಇಂದು ಮನವಿ ಸಲ್ಲಿಸಲಾಯಿತು.

2020ರ ಜ.19ರಂದು ಉಡುಪಿ ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚಿನ ಆವರಣದಲ್ಲಿ ನಡೆದ ಉಡುಪಿ ಧರ್ಮಪ್ರಾಂತ ಮಟ್ಟದ ಕೆಥೊಲಿಕ್ ಕ್ರೈಸ್ತರ ಬೃಹತ್ ಸಮಾವೇಶದ ಉದ್ಘಾಟನಾ ಭಾಷಣದಲ್ಲಿ ಉಡುಪಿ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಪ್ರಜಾಪ್ರಭುತ್ವ ದುರ್ಬಲ ಆಗುತ್ತಿದೆ ಎಂದು ಹೇಳಿದ್ದರು. ಈ ವಿಚಾರವನ್ನು ಎತ್ತಿಕೊಂಡು ಮೋಹನ್ ಸಾಲಿಯಾನ್ ಎಂಬಾತ ತನ್ನ ಫೇಸ್‌ಬುಕ್ ಖಾತೆಯಲ್ಲಿ ಧರ್ಮಾಧ್ಯಕ್ಷರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದಾಗಿ ದೂರಲಾಗಿದೆ.

ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಉಡುಪಿ ಜಿಲ್ಲೆಯ ಇಡೀ ಕ್ರೈಸ್ತ ಸಮುದಾಯದ ಅತ್ಯುನ್ನತ ಧಾರ್ಮಿಕ ನಾಯಕರಾಗಿದ್ದು ಅವರಿಗೆ ಮಾಡಿರುವ ಅವಹೇಳನ ಇಡೀ ಕ್ರೈಸ್ತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಮೋಹನ್ ಸಾಲಿಯಾನ್ ಎಂಬಾತ ಈಗಾಗಲೇ ಫೇಸ್ ಬುಕ್‌ನಲ್ಲಿ ಹಾಕಿರುವ ಪೋಸ್ಟ್ ಎಲ್ಲಾ ಕಡೆಗಳಲ್ಲಿ ವೈರಲ್ ಆಗುತ್ತಿದ್ದು, ಇದರಿಂದ ಸಮಾಜದಲ್ಲಿ ಶಾಂತಿ ಭಂಗಕ್ಕೆ ಕಾರಣವಾಗಲು ಅವಕಾಶ ಮಾಡಿ ಕೊಟ್ಟಂತಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕ್ರೈಸ್ತ ಸಮುದಾಯವು ಉಡುಪಿ ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಶಾಂತಿ ಸೌಹಾರ್ದದಿಂದ ಬಾಳುತ್ತಿದ್ದು, ಈ ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ವನ್ನು ಕೆಲವೊಂದು ವ್ಯಕ್ತಿಗಳು ನಡೆಸುತ್ತಿದ್ದಾರೆ. ಈ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಇಡೀ ಜಿಲ್ಲೆಯ ಕ್ರೈಸ್ತ ಸಮುದಾಯದ ಪರವಾಗಿ ಒತ್ತಾಯಿಸಲಾಗುವುದು. ಅಂತೆಯೇ ಇಂತಹ ಘಟನೆಗಳು ಮುಂದುವರೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಥೋಲಿಕ್ ಸಭಾ ಆಗ್ರಹಿಸಿದೆ.

ನಿಯೋಗದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ, ಕೋಶಾಧಿಕಾರಿ ಜೆರಾಲ್ಡ್ ಪಿಕೆ ಡಿಸೋಜ, ಸಹಕಾರ್ಯದರ್ಶಿ ಗ್ರೆಗರಿ, ಮಾಜಿ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಉಡುಪಿ ವಲಯದ ಮಾಜಿ ಅಧ್ಯಕ್ಷೆ ಮೇರಿ ಡಿಸೋಜ, ಹೆನ್ರಿ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News