ಮಂಗಳೂರು: ಜ. 27ಕ್ಕೆ ಸಿಎಎ, ಎನ್‌ಆರ್‌ಸಿ ಕಾಯ್ದೆ ಬೆಂಬಲಿಸಿ ಬಿಜೆಪಿ ಸಮಾವೇಶ

Update: 2020-01-21 15:30 GMT

ಉಡುಪಿ, ಜ.21: ಸಿಎಎ ಮತ್ತು ಎನ್‌ಆರ್‌ಸಿ ಪರವಾಗಿ, ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಉಡುಪಿ ಮತ್ತು ದ.ಕ.ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಬೃಹತ್ ಸಮರ್ಥನಾ ಸಮಾವೇಶವು ಜ.27ರಂದು ಮಂಗಳೂರು ಸಮೀಪದ ಕೂಳೂರಿನ ಗೋಲ್ಡ್‌ಪಿಂಚ್ ಮೈದಾನದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರಾಹ್ನ 3 ಗಂಟೆಗೆ ನಡೆಯುವ ಈ ಸಮಾವೇಶದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಒಂದರಿಂದ ಎರಡು ಲಕ್ಷ ಮಂದಿ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಪೌರತ್ವ ಕಾಯ್ದೆಯ ಕುರಿತಂತೆ ಜನರಿಗೆ ತಪ್ಪು ಮಾಹಿತಿಗಳನ್ನು ನೀಡಿ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಒಂದು ವರ್ಗದಿಂದ ನಡೆಯುತ್ತಿದೆ. ಇದನ್ನು ತಪ್ಪಿಸಿ ಜನರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಜಾಗೃತಿಗೊಳಿಸುವ ಪ್ರಯತ್ನದ ಭಾಗವಾಗಿ ಈ ಸಮಾವೇಶ ನಡೆಯಲಿದೆ ಎಂದು ಮಟ್ಟಾರು ತಿಳಿಸಿದರು.

ದೇಶದಲ್ಲಿ ಕೆಲವು ಸಂಘಟನೆಗಳು ಪೌರತ್ವ ಕಾಯ್ದೆ ವಿರುದ್ಧ ವ್ಯವಸ್ಥಿತ ಹೋರಾಟ ನಡೆಸುತ್ತಿವೆ. ಗೃಹ ಸಚಿವ ಅಮಿತ್ ಶಾ ಅವರು ಹುಬ್ಬಳ್ಳಿಯಲ್ಲಿ ತಿಳಿಸಿದಂತೆ, ಕಾಂಗ್ರೆಸ್ ಪಕ್ಷ ಇತ್ತೀಚೆಗೆ ನಡೆದ ರಾಜಸ್ತಾನ ವಿಧಾನಸಭಾ ಚುನಾವಣಾ ವೇಳೆ ಪೌರತ್ವ ಕಾಯ್ದೆ ಜಾರಿಯನ್ನು ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿತ್ತು. ಈ ಮೊದಲು ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳೆಲ್ಲವೂ ಕಾಯ್ದೆ ಜಾರಿ ಮಾಡಲು ಬದ್ಧತೆಯನ್ನು ತೋರಿಸಿದ್ದರೂ ಈಗ ಕಾಯ್ದೆ ವಿರುದ್ಧ ಜನರನ್ನು ಎತ್ತಿ ಕಟ್ಟುತ್ತಿವೆ ಎಂದು ಮಟ್ಟಾರು ಆರೋಪಿಸಿದರು.

ಈ ಸಮಾವೇಶಕ್ಕೆ ಉಡುಪಿ ಜಿಲ್ಲೆಯಿಂದ ಸುಮಾರು 30ರಿಂದ 35 ಸಾವಿರ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಲಿ ದ್ದಾರೆ. ಉಡುಪಿಯಿಂದ ತೆರಳುವ ತಂಡದ ನೇತೃತ್ವವನ್ನು ಜಿಲ್ಲೆಯ ಐವರು ಶಾಸಕರಿಗೆ ವಹಿಸಲಾಗಿದೆ. ಅಲ್ಲದೇ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೊಬ್ಬ ಸಮನ್ವಯಕಾರರನ್ನೂ ಇದಕ್ಕಾಗಿ ನೇಮಿಸಲಾಗಿದೆ ಎಂದರು.

ಬೈಂದೂರಿಗೆ ಕುತ್ಯಾರು ನವೀನ ಶೆಟ್ಟಿ, ಕುಂದಾಪುರಕ್ಕೆ ಯಶ್ಪಾಲ್ ಸುವರ್ಣ, ಉಡುಪಿಗೆ ಮಟ್ಟಾರು ರತ್ನಾಕರ ಹೆಗ್ಡೆ, ಕಾಪುವಿಗೆ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಕಾರ್ಕಳಕ್ಕೆ ಕಪ್ಪೆಟ್ಟು ಪ್ರವೀಣ್ ಶೆಟ್ಟಿ ಅವರನ್ನು ಸಮನ್ವಯಕಾರ ರಾಗಿ ನೇಮಿಸಲಾಗಿದೆ ಎಂದರು.

ಖಂಡನೆ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಜೀವಂತ ಬಾಂಬ್‌ನ್ನು ಇರಿಸಿದ ಘಟನೆಯನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದ ಮಟ್ಟಾರು ರತ್ನಾಕರ ಹೆಗ್ಡೆ, ದೇಶದಲ್ಲಿ ಒಂದು ವರ್ಗದ ಜನ ಶಾಂತಿಯನ್ನು ಕೆಡಿಸುವ ಕೆಲಸವನ್ನು ಮಾಡುತಿದ್ದು, ಇವರನ್ನು ಮಟ್ಟ ಹಾಕಬೇಕಾಗಿದೆ ಎಂದರು. ಘಟನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶೃಂಗೇರಿಯಲ್ಲಿ ನೀಡಿದ ಹೇಳಿಕೆಯನ್ನು ಖಂಡಿಸಿದ ಅವರು, ಇದು ಪೊಲೀಸರ ನೈತಿಕತೆಯನ್ನು ಕುಂದಿಸುವ ಪ್ರಯತ್ನ ಎಂದರು.

ಬೆಳಪುನಲ್ಲಿ ಅಕ್ರಮ ವಲಸಿಗರು: ಕಾಪು ತಾಲೂಕಿನ ಬೆಳಪು, ಮಲ್ಲಾರು ಪ್ರದೇಶಗಳಲ್ಲಿ ಅಕ್ರಮ ವಲಸಿಗರು ನೆಲೆಸಿರುವುದು ಬೆಳಕಿಗೆ ಬಂದಿದ್ದು, ಅಲ್ಲಿನ ಸ್ಥಳೀಯ ಮುಸ್ಲಿಂರೂ ಅವರ ಪರಿಚಯವಿಲ್ಲ ಎಂದು ಹೇಳುತಿದ್ದಾರೆ ಹಾಗೂ ಅವರ ಬಗ್ಗೆ ಆತಂಕವನ್ನು ವ್ಯಕ್ತಪಡಿಸುತಿದ್ದಾರೆ ಎಂದು ಮಟ್ಟಾರು ಹೇಳಿದರು.

ಈಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇರುವುದರಿಂದ ಯಾಕೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬಾರದು ಎಂದು ಪ್ರಶ್ನಿಸಿದಾಗ, ಅವರು ತಾವು ಉತ್ತರ ಪ್ರದೇಶ, ಬಿಹಾರದಿಂದ ಬಂದವರು ಎಂದು ಹೇಳುತಿದ್ದಾರೆ ಎಂದರು. ಆ ರಾಜ್ಯ ದಿಂದ ಬಂದವರಾದರೆ ಅವರು ಹೇಗೆ ಅಕ್ರಮ ವಲಸಿಗ ರಾಗುತ್ತಾರೆ ಎಂದು ಪ್ರಶ್ನಿಸಿದಾಗ ಹಾರಿಕೆ ಉತ್ತರ ನೀಡಿದ ಮಟ್ಟಾರು, ಈ ಬಗ್ಗೆ ಸೂಕ್ತ ತಪಾಸಣೆ ನಡೆಯಬೇಕಾಗಿದೆ ಎಂದರು.

ಶೀಘ್ರವೇ ಹೊಸ ಅಧ್ಯಕ್ಷರು: ಉಡುಪಿ ಬಿಜೆಪಿಗೆ ಶೀಘ್ರವೇ ಹೊಸ ಅಧ್ಯಕ್ಷರ ಹೆಸರನ್ನು ರಾಜ್ಯ ನಾಯಕರು ಪ್ರಕಟಿಸಲಿದ್ದಾರೆ. ಈಗಾಗಲೇ ಜಿಲ್ಲೆಯಿಂದ ಮೂರು ಹೆಸರುಗಳು ಹೋಗಿದ್ದು, ಇವರಲ್ಲಿ ಒಬ್ಬರನ್ನು ಅಥವಾ ಸೂಕ್ತವೆಂದು ಕಂಡ ಇತರರನ್ನು ರಾಜ್ಯ ನಾಯಕರು ಆಯ್ಕೆ ಮಾಡಲಿದ್ದಾರೆ ಎಂದರು.

ಈಗಾಗಲೇ ರಾಜ್ಯಾಧ್ಯಕ್ಷರ ಹೆಸರನ್ನು ಪ್ರಕಟಿಸಿರುವುದರಿಂದ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಗೊಂದಲವಿದೆಯೇ ಎಂದು ಪ್ರಶ್ನಿಸಿದಾಗ, ಅಂಥಾ ಯಾವುದೇ ಗೊಂದಲಗಳಾಗಲೀ, ವಿವಾದವಾಗಲೀ ಇಲ್ಲ. ಉಡುಪಿ ಪರ್ಯಾಯದ ಕಾರಣ ಅದು ಮುಗಿದ ಮೇಲೆ ಹೆಸರು ಪ್ರಕಟಿಸುವಂತೆ ತಾವೇ ಮನವಿ ಮಾಡಿದ್ದಾಗಿ ಮಟ್ಟಾರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಪ್ರಭಾಕರ ಪೂಜಾರಿ, ಗಿರೀಶ್ ಆಂಚನ್, ಪ್ರತಾಪ್ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News