ಮಂಗಳೂರು: ಜ. 27ರಂದು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಸಮಾವೇಶ

Update: 2020-01-21 15:37 GMT

ಮಂಗಳೂರು, ಜ.21: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಬೃಹತ್ ಜನಜಾಗೃತಿ ಸಮಾವೇಶ ಮತ್ತು ಈ ಕಾಯಿದೆಯ ಮುಖ್ಯ ರೂವಾರಿಗಳಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಕೃತಜ್ಞತಾ ಕಾರ್ಯಕ್ರಮ ಜ.27ರಂದು ಮಧ್ಯಾಹ್ನ ಮೂರು ಗಂಟೆಗೆ ಕೂಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಂಜೀವ ಮಠಂದೂರು ಹೇಳಿದರು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯದ ಸಚಿವರು, ಸಂಸದರಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದೆ ಶೋಭಾ ಕರಂದ್ಲಾಜೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ  ಅವರು ತಿಳಿಸಿದರು.

ಗೋಲ್ಡ್ ಫಿಂಚ್ ಸಿಟಿ 108 ಎಕರೆ ವಿಸ್ತಾರ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 1861 ಬೂತ್ ಮತ್ತು ಉಡುಪಿ ಜಿಲ್ಲೆಯ ಸುಮಾರು ಒಂದು ಸಾವಿರ ಬೂತ್‌ಗಳಿಂದ ಸುಮಾರು ಒಂದೂವರೆ ಲಕ್ಷದಷ್ಟು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪ್ರತಿ ಬೂತ್‌ನಿಂದ 100 ಮಂದಿಯನ್ನು ಕರೆದುಕೊಂಡು ಬರಲು ಪಕ್ಷದ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.

ಎರಡೂ ಜಿಲ್ಲೆಯ ವರ್ತಕರು, ಉದ್ಯಮಿಗಳು, ಬಸ್, ಕಾರು, ಆಟೋ ಚಾಲಕರು ಮತ್ತು ಮಾಲೀಕರು ತಮ್ಮ ವ್ಯವಹಾರಗಳನ್ನು ಸ್ವಯಂಪ್ರೇರಿತವಾಗಿ ಸ್ಥಗಿತಗೊಳಿಸಿ ಸಮಾವೇಶದಲ್ಲಿ ಭಾಗವಹಿಸಲು ಮನವಿ ಮಾಡಲಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಷಾ ಅವರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಇಂಥ ಸಮಾವೇಶ ನಡೆದಿದ್ದು, ಇದೀಗ ಮೂರನೇ ಸಮಾವೇಶ ಮಂಗಳೂರಿನಲ್ಲಿ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟ ಎಲ್ಲಾ ಮತದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅವರು ವಿನಂತಿಸಿದರು.

ಸಮಾವೇಶದಲ್ಲಿ ಸಿಎಎ ಕುರಿತು ಸಾರ್ವಜನಿಕರಲ್ಲಿ ಇರುವ ಗೊಂದಲಗಳಿಗೆ ಹಾಗೂ ತಪ್ಪು ಕಲ್ಪನೆಗಳಿಗೆ ಸ್ಪಷ್ಟನೆ ಹಾಗೂ ಸಮಗ್ರ ಮಾಹಿತಿ ಕೊಡಲಾಗುವುದು ಎಂದು ಅವರು ಹೇಳಿದರು.

ಶಾಸಕರಾದ ವೇದವ್ಯಾಸ ಕಾಮತ್ ಡಿ., ಡಾ.ಭರತ್ ಶೆಟ್ಟಿ ವೈ., ಬಿಜೆಪಿ ಜಿಲ್ಲಾ ನಿಯೋಜಿತ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಕಾರ್ಪೋರೇಟರ್ ಸುೀರ್ ಕಣ್ಣೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕುಮಾರಸ್ವಾಮಿ ಮಂಪರು ಪರೀಕ್ಷೆಗೊಳಪಡಿಸಬೇಕು: ಸಂಜೀವ ಮಠಂದೂರು

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ಕುರಿತು ಪೊಲೀಸರ ವಿರುದ್ಧ ವ್ಯತಿರಿಕ್ತ ಹೇಳಿಕೆ ನೀಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮಂಪರು ಪರೀಕ್ಷೆ ಮಾಡಬೇಕು ಮತ್ತು ಅವರನ್ನು ನಿಮಾನ್ಸ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಕೆಲವು ಸಮಾಜಘಾತಕ ಶಕ್ತಿಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರೇರಣೆ ನೀಡುತ್ತಿದ್ದಾರೆ. ಅವರು ಪೊಲೀಸರ ನೈತಿಕತೆ ಪ್ರಶ್ನಿಸಿದ್ದಾರೆ. ಸಂಭಾವ್ಯ ದೊಡ್ಡ ದುರಂತವನ್ನು ತಪ್ಪಿಸಿದ ಪೊಲೀಸರಿಗೆ ಧೈರ್ಯ ಕೊಡುವ ಬದಲು ರಾಜಕೀಯ ಪ್ರೇರಿತರಾಗಿ ಮಾತನಾಡಿರುವುದು ಸರಿಯಲ್ಲ. ಮಂಗಳೂರಿನ ಗೋಲಿಬಾರ್ ಸಂದರ್ಭದಲ್ಲೂ ಸಿಡಿ ಬಿಡುಗಡೆ ಮಾಡಿ ಗೊಂದಲ ಸೃಷ್ಟಿಸಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣವು ಜನರನ್ನು ಆತಂಕಕ್ಕೆ ದೂಡಿದೆ. ಆದ್ದರಿಂದ ಪೊಲೀಸರು ಕೂಲಂಕಷ ತನಿಖೆ ನಡೆಸಿ, ಆರೋಪಿ ಮತ್ತು ಆತನ ಹಿಂದಿರುವ ಶಕ್ತಿಗಳನ್ನು ತಕ್ಷಣ ಪತ್ತೆ ಹಚ್ಚಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಂಡು, ಜನರನ್ನು ಭಯ ಮುಕ್ತರನ್ನಾಗಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News