ಭೀಮ್ ಆರ್ಮಿಯ ಆಝಾದ್‌ ಜಾಮೀನು ಆದೇಶ ಪರಿಷ್ಕರಿಸಿದ ದಿಲ್ಲಿ ನ್ಯಾಯಾಲಯ

Update: 2020-01-21 15:49 GMT

ಹೊಸದಿಲ್ಲಿ,ಜ.21: ಕಳೆದ ತಿಂಗಳು ಇಲ್ಲಿಯ ಜಾಮಾ ಮಸೀದಿ ಬಳಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಜನರನ್ನು ಪ್ರಚೋದಿಸಿದ್ದ ಆರೋಪವನ್ನು ಎದುರಿಸುತ್ತಿರುವ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಝಾದ್ ಅವರ ಜಾಮೀನು ಆದೇಶವನ್ನು ಮಂಗಳವಾರ ಪರಿಷ್ಕರಿಸಿರುವ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು,ವೈದ್ಯಕೀಯ ಕಾರಣಗಳಿಗಾಗಿ ಮತ್ತು ಚುನಾವಣಾ ಉದ್ದೇಶಕ್ಕಾಗಿ ದಿಲ್ಲಿಗೆ ಭೇಟಿ ನೀಡಲು ಅವರಿಗೆ ಅವಕಾಶವನ್ನು ಕಲ್ಪಿಸಿದೆ. ತನ್ನ ನಿಗದಿತ ಕಾರ್ಯಕ್ರಮದ ಬಗ್ಗೆ ದಿಲ್ಲಿ ಪೊಲೀಸರಿಗೆ ಪೂರ್ವ ಮಾಹಿತಿ ನೀಡುವಂತೆ ಅದು ಆಝಾದ್‌ಗೆ ಸೂಚಿಸಿದೆ.

ಡಿ.20ರಂದು ದಿಲ್ಲಿಯ ದರಿಯಾಗಂಜ್ ಪ್ರದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆಝಾದ್‌ಗೆ ಜಾಮೀನು ಆದೇಶವನ್ನು ಪರಿಷ್ಕರಿಸಿದ ನ್ಯಾ.ಕಾಮಿನಿ ಲಾವು ಅವರು ಈ ನಿರ್ದೇಶಗಳನ್ನು ಹೊರಡಿಸಿದರು.

ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವ ಸಂದರ್ಭದದಲ್ಲಿ ನಾಲ್ಕು ವಾರಗಳ ಕಾಲ ಆಝಾದ್ ದಿಲ್ಲಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಿದ್ದ ನ್ಯಾಯಾಲಯವು,ದಿಲ್ಲಿ ವಿಧಾನಸಭಾ ಚುನಾವಣೆಗಳವರೆಗೆ ಯಾವುದೇ ಧರಣಿಯನ್ನು ನಡೆಸದಂತೆ ಅವರಿಗೆ ಸೂಚಿಸಿತ್ತು.

ದಿಲ್ಲಿಯಲ್ಲಿರುವ ಆಝಾದ್‌ರ ಕಚೇರಿಯು ರಾಜಕೀಯ ಪಕ್ಷದ ಕಚೇರಿಯೇ ಎನ್ನುವುದನ್ನು ಚುನಾವಣಾ ಆಯೋಗದಿಂದ ದೃಢಪಡಿಸಿಕೊಳ್ಳುವಂತೆ ಮತ್ತು ಮಂಗಳವಾರದೊಳಗೆ ತನಗೆ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ದಿಲ್ಲಿ ಪೊಲೀಸರಿಗೆ ನಿರ್ದೇಶ ನೀಡಿತ್ತು.

ತನ್ನ ಜಾಮೀನು ಆದೇಶದಲ್ಲಿಯ ಷರತ್ತುಗಳನ್ನು ಪರಿಷ್ಕರಿಸುವಂತೆ ಕೋರಿ ಆಝಾದ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News