ಜೂನ್ 1ರಿಂದ ದೇಶಾದ್ಯಂತ ‘ಒಂದು ದೇಶ, ಒಂದು ಪಡಿತರ ಚೀಟಿ’ ಅನುಷ್ಠಾನ

Update: 2020-01-21 16:10 GMT

ಹೊಸದಿಲ್ಲಿ, ಜ. 21: ದೇಶದ ಯಾವುದೇ ಭಾಗದ ಪಡಿತರ ಅಂಗಡಿಯಿಂದ ಸಬ್ಸಿಡಿ ಆಹಾರ ಧಾನ್ಯಗಳನ್ನು ಫಲಾನುಭವಿಗಳು ಖರೀದಿಸಲು ಸಾಧ್ಯವಾಗುವ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ಯನ್ನು ಕೇಂದ್ರ ಸರಕಾರ ದೇಶಾದ್ಯಂತ ಜೂನ್ 1ರಿಂದ ಅನುಷ್ಠಾನಗೊಳಿಸಲಿದೆ.

ಬಿಹಾರದ ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರದ ಗ್ರಾಹಕ ವ್ಯವಹಾರ, ಆಹಾರ ಹಾಗೂ ಸಾರ್ವಜನಿಕ ವಿತರಣೆ ಖಾತೆಯ ಸಚಿವ ರಾಮ್ ವಿಲಾಸ್ ಪಾಸ್ವಾನ್, ನಾವು ಜೂನ್ 1ರಿಂದ ದೇಶಾದ್ಯಂತ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ಯನ್ನು ಅನುಷ್ಠಾನಗೊಳಿಸಲಿದ್ದೇವೆ ಎಂದರು. ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳು ತಮ್ಮ ಪಡಿತರ ಚೀಟಿ ಬಳಸಿ ಸೌಲಭ್ಯಗಳನ್ನು ದೇಶದ ಯಾವುದೇ ಭಾಗದಲ್ಲಿರುವ ಪಡಿತರ ಅಂಗಡಿಯಿಂದ ಪಡೆಯಬಹುದು ಎಂದು ಅವರು ಹೇಳಿದರು.

 ಈ ಯೋಜನೆಯನ್ನು ಜನವರಿ 1ರಿಂದ 12 ರಾಜ್ಯಗಳಲ್ಲಿ ಆರಂಭಿಸಲಾಗುವುದು. ಅನಂತರ ಜೂನ್ ಒಳಗೆ ದೇಶದ ಇತರ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಈ ಹಿಂದೆ ಪಾಸ್ವಾನ್ ಹೇಳಿದ್ದರು. ಆರಂಭಿಕ ಹಂತದಲ್ಲಿ ಈ ಯೋಜನೆಯನ್ನು 12 ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಹರ್ಯಾಣ, ರಾಜಸ್ಥಾನ, ಕರ್ನಾಟಕ, ಕೇರಳ, ಗೋವಾ, ಮಧ್ಯಪ್ರದೇಶ, ತ್ರಿಪುರಾ ಹಾಗೂ ಜಾರ್ಖಂಡ್‌ನಲ್ಲಿ ಅನುಷ್ಠಾನಗೊಳಿಸಲಾಗುವುದು. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಫಲಾನುಭವಿಗಳು ಈ 12 ರಾಜ್ಯಗಳಲ್ಲಿ ಯಾವುದೇ ಭಾಗದಿಂದ ತಮ್ಮಲ್ಲಿರುವ ಪ್ರಸ್ತುತ ಇರುವ ಪಡಿತರ ಚೀಟಿಯಿಂದ ಪಡಿತರ ಸಾಮಗ್ರಿಗಳನ್ನು ಪಡೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News