ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥನ ವಿರುದ್ಧ 1 ಕೋ.ರೂ. ಮಾನನಷ್ಟ ಮೊಕದ್ದಮೆ

Update: 2020-01-21 16:26 GMT
ಫೋಟೊ ಕೃಪೆ: twitter.com/amitmalviya

 ಹೊಸದಿಲ್ಲಿ, ಜ. 21: ಪ್ರತಿಭಟನೆ ನಡೆಸಲು ಶಹೀನ್‌ ಬಾಗ್ ಪ್ರತಿಭಟನಕಾರರು ಲಂಚ ಸ್ವೀಕರಿಸಿದ್ದಾರೆ ಎಂದು ಟ್ವಿಟರ್‌ನಲ್ಲಿ ನಕಲಿ ವೀಡಿಯೊ ಶೇರ್ ಮಾಡಿದ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವಿಯ ವಿರುದ್ಧ ಶಹೀನ್ ಭಾಗ್‌ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಇಬ್ಬರು ಮಹಿಳೆಯರು 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಶಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರಿಗೆ ಕಾಂಗ್ರೆಸ್ ಹಣ ನೀಡಿದೆ ಎಂಬ ಮಾಳವೀಯ ಅವರ ಆರೋಪ ವೈರಲ್ ಆದ ಬಳಿಕ ಈ ಮಹಿಳೆಯರು ಅಮಿತ್ ಮಾಳವಿಯ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ನೋಟಿಸು ಕಳುಹಿಸಿದ್ದಾರೆ. ಪ್ರತಿಭಟನಾಕಾರರು ಲಂಚ ಸ್ವೀಕರಿಸಿದ್ದಾರೆ ಎಂದು ಹೇಳಲಾಗಿರುವ ವೀಡಿಯೊವನ್ನು ಮಾಳವೀಯ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದರು. ಧರಣಿ ಕುಳಿತುಕೊಳ್ಳಲು ಮಹಿಳಾ ಪ್ರತಿಭಟನಾಕಾರರು ದಿನವೊಂದಕ್ಕೆ 500ರಿಂದ 1,200ರ ವರೆಗೆ ಲಂಚ ಸ್ವೀಕರಿಸಿದ್ದಾರೆ. ಅಲ್ಲದೆ ಅವರು ಆಹಾರ ಹಾಗೂ ಇತರ ಉತ್ತೇಜಕಗಳನ್ನು ಪಡೆದಿದ್ದಾರೆ ಎಂದು ಅನಾಮಿಕ ವ್ಯಕ್ತಿಯೋರ್ವ ವೀಡಿಯೊದಲ್ಲಿ ಪ್ರತಿಪಾದಿಸಿದ್ದಾನೆ. ಈ ವೀಡಿಯೊವನ್ನು ಮಾಳವೀಯ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಮಹಿಳೆಯರು ಮಾಳವೀಯ ಅವರ ವಿರುದ್ಧ 1 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅಲ್ಲದೆ, ಮಾಳವಿಯ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ. ಶಹೀನ್ ಬಾಗ್ ಹಾಗೂ ಸೀಲಾಂಪುರದಂತಹ ಇತರ ಪ್ರದೇಶಗಳ ಪ್ರತಿಭಟನಾಕಾರರಿಗೆ ಕಾನೂನು ಸಲಹೆಗಾರರಾಗಿರುವ ನ್ಯಾಯವಾದಿ ಮುಹಮ್ಮದ್ ಪ್ರಾಚಾ ಅವರ ಕಚೇರಿಯಿಂದ ಮಹಿಳೆಯರು ಈ ನೋಟಿಸ್ ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News