ವಿದ್ಯಾರ್ಥಿಗಳು ಬಯೋಮೆಟ್ರಿಕ್, ಸಿಸಿಟಿವಿ ನಾಶಮಾಡಿಲ್ಲ: ಉಲ್ಟಾ ಹೊಡೆದ ಜೆಎನ್ ಯು ಆಡಳಿತ

Update: 2020-01-21 16:53 GMT

ಹೊಸದಿಲ್ಲಿ, ಜ. 21: ಜವಾಹಾರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಜನವರಿ 3ರಂದು ನಡೆದ ಹಿಂಸಾಚಾರದ ಸಂದರ್ಭ ಸರ್ವರ್ ಕೊಠಡಿಯ ಬಯೋಮೆಟ್ರಿಕ್ ವ್ಯವಸ್ಥೆ ಹಾಗೂ ಸಿಸಿಟಿವಿ ಕೆಮರಾಗಳನ್ನು ವಿದ್ಯಾರ್ಥಿಗಳು ಹಾಳುಗೆಡಹಿಲ್ಲ ಎಂದು ಜೆಎನ್‌ಯು ಆರ್‌ಟಿಐ ಅರ್ಜಿಗೆ ಉತ್ತರ ನೀಡಿದೆ.

ವಿಶ್ವವಿದ್ಯಾನಿಲಯದ ಸರ್ವರ್ ಕೊಠಡಿಯ ಬಯೋಮೆಟ್ರಿಕ್ ವ್ಯವಸ್ಥೆ ಹಾಗೂ ಸಿಸಿಟಿವಿಗಳನ್ನು ವಿದ್ಯಾರ್ಥಿಗಳು ಹಾಳುಗೆಡಹಿದ್ದಾರೆ ಎಂದು ಈ ಹಿಂದೆ ಜೆಎನ್‌ಯು ಆಡಳಿತ ಮಂಡಳಿ ಹೇಳಿಕೆ ನೀಡಿತ್ತು. ಆದರೆ, ಈಗ ನೀಡಿದ ಅದಕ್ಕೆ ವಿರುದ್ಧವಾಗಿದೆ. ನ್ಯಾಶನಲ್ ಕ್ಯಾಂಪೇನ್ ಫಾರ್ ಪೀಪಲ್ಸ್ ರೈಟ್ ಟು ಇನ್‌ಫಾರ್ಮೇಶನ್ (ಎನ್‌ಸಿಪಿಆರ್‌ಐ) ಸದಸ್ಯ ಸೌರವ್ ದಾಸ್ ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆ ನೀಡಿದ ಜೆಎನ್‌ಯು, ವಿಶ್ವವಿದ್ಯಾನಿಲಯದ ‘ಸೆಂಟರ್ ಫಾರ್ ಇನ್‌ಫಾರ್ಮೇಶನ್ ಸಿಸ್ಟಮ್’ (ಸಿಐಎಸ್) ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಕಾರಣಕ್ಕೆ ಜನವರಿ 3ರಂದು ಮುಚ್ಚಿತ್ತು. ಮರುದಿನ ತೆರೆಯಲಾಗಿತ್ತು ಎಂದು ಹೇಳಿದೆ.

ಮುಸುಕುಧಾರಿ ದುಷ್ಕರ್ಮಿಗಳು ಜೆಎನ್‌ಯು ಕ್ಯಾಂಪಸ್ ಪ್ರವೇಶಿಸಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಕಬ್ಬಿಣದ ರಾಡ್‌ನಿಂದ ಥಳಿಸಿದ ದಿನವಾದ ಜನವರಿ 5ರ ಸಂಜೆ 3ರಿಂದ ರಾತ್ರಿ 11 ಗಂಟೆ ವರೆಗೆ ಉತ್ತರ ಹಾಗೂ ಮುಖ್ಯ ಗೇಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದ ‘ನಿರಂತರ ಹಾಗೂ ಸಂಪೂರ್ಣ’ ದೃಶ್ಯಾವಳಿ ಲಭ್ಯವಾಗಿಲ್ಲ ಎಂದು ಕೂಡ ವಿಶ್ವವಿದ್ಯಾನಿಲಯ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

ಜನವರಿ 3ರಂದು ಮಸುಕುಧಾರಿ ವಿದ್ಯಾರ್ಥಿಗಳು ಬಲವಂತವಾಗಿ ಸಿಐಎಸ್‌ಗೆ ಪ್ರವೇಶಿಸಿದರು. ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದರು. ಸರ್ವರ್ ಕಾರ್ಯ ನಿರ್ವಹಿಸದಂತೆ ಮಾಡಿದ್ದರು. ಇದರಿಂದ ಸಿಸಿಟಿ ಪರಿವೀಕ್ಷಣೆ, ಬಯೋಮೆಟ್ರಿಕ್ ಹಾಜರಾತಿ ಹಾಗೂ ಇಂಟರ್‌ನೆಟ್ ಸೇವೆ ಸೇರಿದಂತೆ ಹಲವು ಕಾರ್ಯಗಳ ಮೇಲೆ ಪರಿಣಾಮ ಉಂಟಾಗಿತ್ತು ಎಂದು ಜೆಎನ್‌ಯು ಆಡಳಿತ ಎಫ್‌ಐಆರ್‌ನಲ್ಲಿ ಪ್ರತಿಪಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News