ರೈಲಿನಡಿಗೆ ಹಾರಿ ಯುವಕನ ಆತ್ಮಹತ್ಯೆ: ಪೊಲೀಸ್ ದೌರ್ಜನ್ಯ ಆರೋಪಿಸಿ ಪ್ರತಿಭಟನೆ

Update: 2020-01-21 17:15 GMT

ಬೈಂದೂರು, ಜ.21: ನಾಗೂರು ಕಿರಿಮಂಜೇಶ್ವರ ಕಳ್ಳಂಗಡಿ ಎಂಬಲ್ಲಿ ಜ.21ರಂದು ಮುಂಜಾನೆ ಯುವಕನೋರ್ವ ಚಲಿಸುತ್ತಿದ್ದ ರೈಲಿನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಸಾವಿಗೆ ಪೊಲೀಸರ ಕಿರುಕುಳವೇ ಕಾರಣ ಎಂಬುದಾಗಿ ಆರೋಪಿಸಿ ಮನೆಯವರು ಮೃತದೇಹವನ್ನು ಸ್ಥಳದಲ್ಲೇ ಇರಿಸಿ ಪ್ರತಿಭಟನೆ ನಡೆಸಿದರು.

ಮೃತರನ್ನು ಕಿರಿಮಂಜೇಶ್ವರ ಶಾಲೆಬಾಗಿಲು ನಿವಾಸಿ ರಾಮ ಪೂಜಾರಿ (32) ಎಂದು ಗುರುತಿಸಲಾಗಿದೆ. ಚಾಲಕ ವೃತ್ತಿ ನಡೆಸುತ್ತಿದ್ದ ಇವರನ್ನು ಬೈಂದೂರು ಪೊಲೀಸರು ಯುವತಿಯೊಬ್ಬಳು ನೀಡಿದ ದೂರಿನ ಹಿನ್ನೆಲೆ ವಿಚಾರಣೆಗೆ ಜ.20ರಂದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಅಲ್ಲಿಂದ ತಡರಾತ್ರಿ ವೇಳೆ ಮನೆಗೆ ಬಂದ ರಾಮ ಪೂಜಾರಿ, ನಂತರ ಶವವಾಗಿ ರೈಲ್ವೆ ಹಳಿಯಲ್ಲಿ ಪತ್ತೆ ಯಾಗಿದ್ದಾರೆ.

ಪೊಲೀಸರು ವಿಚಾರಣೆ ಸಂದರ್ಭ ರಾಮ ಪೂಜಾರಿ ಮೇಲೆ ದೌರ್ಜನ್ಯ ಎಸಗಿದ್ದು, ಇದೇ ವಿಚಾರದಲ್ಲಿ ನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮನೆಯವರು ಆರೋಪಿಸಿದ್ದಾರೆ. ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರು ಮೃತದೇಹವನ್ನು ರೈಲ್ವೆ ಹಳಿಯ ಬಳಿ ಇಟ್ಟು ಮಧ್ಯಾಹ್ನದವರೆಗೂ ಪ್ರತಿಭಟನೆ ನಡೆಸಿದರು.

 ಬಳಿಕ ಸ್ಥಳಕ್ಕೆ ಆಗಮಿಸಿದ ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ ಬಳಿಕ, ಮನೆಯವರು ಶವವನ್ನು ಮರಣೋತ್ತರ ಪರೀಕ್ಷೆಗೆ ಒಪ್ಪಿಸಿದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News