ಗರ್ಭಿಣಿಯನ್ನು 30 ಕಿಲೋಮೀಟರ್ ಹೊತ್ತೊಯ್ದು ಜೀವ ಉಳಿಸಿದ ವೈದ್ಯರು!

Update: 2020-01-22 05:21 GMT

ಭುವನೇಶ್ವರ, ಜ.22: ನಕ್ಸಲ್‌ಪೀಡಿತ ಮಲ್ಕನಗಿರಿ ಜಿಲ್ಲೆಯ ಗುಡ್ಡಗಾಡು ಗ್ರಾಮವೊಂದಕ್ಕೆ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕಾಗಿ ತೆರಳಿದ್ದ ಯುವ ವೈದ್ಯರೊಬ್ಬರು ಗರ್ಭಿಣಿ ಮಹಿಳೆಯ ಪಾಲಿಗೆ ದೇವದೂತನಾದ ಘಟನೆ ನಡೆದಿದೆ. ವೈದ್ಯ ಹಾಗೂ ಅವರ ಜತೆಗಿದ್ದ ಆರೋಗ್ಯ ಕಾರ್ಯಕರ್ತರ ತಂಡ ಗರ್ಣಿಣಿಯನ್ನು 30 ಕಿಲೋಮೀಟರ್ ದೂರದ ಸರ್ಕಾರಿ ಆಸ್ಪತ್ರೆಗೆ ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡು ಬಂದು ಮಾನವೀಯತೆ ಮೆರೆದಿದ್ದಾರೆ.

ಕಲಿಮೆಲಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿರುವ ರಾಧೇಶ್ಯಾಮ್ ಜೆನಾ ಕರ್ಮನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಿದುಲಗುಂಡಿ ಗ್ರಾಮಕ್ಕೆ ಪೋಲಿಯೊ ಲಸಿಕೆ ಹಾಕಲು ಹೋಗಿದ್ದಾಗ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಯಾತನೆ ಅನುಭವಿಸುತ್ತಿರುವುದು ತಿಳಿದುಬಂತು.

ಮನೆಯಲ್ಲಿ ಗರ್ಭಿಣಿ ಹೆರಿಗೆ ನೋವಿನಿಂದ ಬಳಲುತ್ತಿದ್ದರೂ, ಗ್ರಾಮಕ್ಕೆ ವಾಹನ ಹೋಗುವ ರಸ್ತೆ ಇಲ್ಲದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಿರಲಿಲ್ಲ. "ಆಕೆಯ ಮನೆಯನ್ನು ನಾವು ತಲುಪಿದಾಗ ಮಹಿಳೆಗೆ ಸ್ರಾವವಾಗುತ್ತಿರುವುದು ಕಂಡುಬಂತು. ಅಕ್ಕಪಕ್ಕದ ಪರಿಸರ ತೀರಾ ಅನೈರ್ಮಲ್ಯದಿಂದ ಕೂಡಿತ್ತು. ಆದರೂ ಸುರಕ್ಷಿತವಾಗಿ ಹೆರಿಗೆ ಮಾಡಿಸಿದೆ. ಆದರೂ ಸ್ರಾವ ನಿಂತಿರಲಿಲ್ಲ. ಆಕೆಯ ಗರ್ಭಕೋಶದಲ್ಲಿ ಮತ್ತೊಂದು ಮಗು ಇತ್ತು. ಮೊಬೈಲ್ ಸಿಗ್ನಲ್ ಕೂಡಾ ಇರಲಿಲ್ಲ. ಬೆಟ್ಟದ ಮೇಲೆ ಹೋಗಿ ಅಸ್ಪತ್ರೆಯ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದೆ. ಹೇಗಾದರೂ ಆಸ್ಪತ್ರೆಗೆ ದಾಖಲಿಸಿ ಆಕೆಯ ಪ್ರಾಣರಕ್ಷಣೆ ಮಾಡಬೇಕು ಎಂದು ಸಿಡಿಎಂಓ ಹೇಳಿದರು. ಆದ್ದರಿಂದ ಕುಟುಂಬದ ಇಬ್ಬರು ಹಾಗೂ ನಮ್ಮ ತಂಡದ ಆರು ಮಂದಿ ಸ್ಟ್ರೆಚರ್‌ನಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದೆವು" ಎಂದು ವಿವರಿಸಿದರು.

ಮಧ್ಯಾಹ್ನ 12 ಗಂಟೆಗೆ ಮನೆಯಿಂದ ಹೊರಟು ಗುಡ್ಡಗಾಡಿನ ಮೂಲಕ ನಡೆದುಕೊಂಡು ರಾತ್ರಿ 8 ಗಂಟೆ ವೇಳೆಗೆ ಆಸ್ಪತ್ರೆಗೆ ತಲುಪಿದರು. ಆಸ್ಪತ್ರೆಗೆ ತಲುಪಿದ ಬಳಿಕ ಮಹಿಳೆಗೆ ಹೆರಿಗೆಯಾದರೂ ಮಗು ಮೃತಪಟ್ಟಿತ್ತು. ಮಹಿಳೆಯ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News