ಬೆಳಪು, ಮಲ್ಲಾರಿನಲ್ಲಿ ಅಕ್ರಮ ವಲಸಿಗರು: ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆಗೆ ವ್ಯಾಪಕ ಆಕ್ರೋಶ

Update: 2020-01-22 05:42 GMT

ಪಡುಬಿದ್ರೆ, ಜ.22: ಕಾಪು ತಾಲೂಕಿನ ಬೆಳಪು ಮತ್ತು ಮಲ್ಲಾರು ಪ್ರದೇಶದಲ್ಲಿ ಅಕ್ರಮ ವಲಸಿಗರು ನೆಲೆಸಿದ್ದಾರೆ ಎಂದು ಮಂಗಳವಾರ ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ನೀಡಿದ್ದ ಹೇಳಿಕೆಗೆ ಸ್ಥಳೀಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

 ಮಟ್ಟಾರು ರತ್ನಾಕರ ಹೆಗ್ಡೆ ಹೇಳಿಕೆಯನ್ನು ಖಂಡಿಸಿ ಮಂಗಳವಾರ ಸಂಜೆ ಬೆಳಪು ವೃತ್ತದ ಬಳಿ ಜಮಾಯಿಸಿದ ನೂರಾರು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ಆಧಾರರಹಿರವಾಗಿ ಇಂತಹ ಹೇಳಿಕೆ ನೀಡಿದ ರತ್ನಾಕರ ಮಟ್ಟಾರ್ ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಯತ್ನಿಸುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಬೆಳಪುವಿನಲ್ಲಿ ಬಡಜನರು ವಾಸಿಸುತ್ತಿದ್ದಾರೆ ಬಿಜೆಪಿಗೆ ಮಟ್ಟಾರು ವಲಸಿಗ ಎಂದು ತಿರುಗೇಟು ನೀಡಿದ್ದಾರೆ. ಬೆಳಪುವಿನಲ್ಲಿ ಕಳೆದ ಕೆಲವು ದಶಕಗಳಿಂದ ಜಾತಿ-ಭೇದವಿಲ್ಲದೆ ಧರ್ಮಗಳಲ್ಲಿ ಅಂತರ ವಿರದೇ ಎಲ್ಲರನ್ನು ಪ್ರೀತಿಸಿ ಶಾಂತಿಯಿಂದ ಜೀವನ ನಡೆಸುವ ಜನರಿದ್ದಾರೆ. ಇಲ್ಲಿ ಶಾಂತಿ ಕದಡುವ ಬಿಜೆಪಿಯವರ ಹುನ್ನಾರ ಫಲಿಸದು. ಇಂತಹ ನಾಯಕರ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಶೆಟ್ಟಿ ಒತ್ತಾಯಿಸಿದ್ದಾರೆ.

ಬೆಳಪು ಗ್ರಾಮದಲ್ಲಿ ಸಾಮರಸ್ಯವನ್ನು ಕೆಡಿಸುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಶೆಟ್ಟಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News